ADVERTISEMENT

ಯಾತ್ರಿ ನಿವಾಸ್ ಅವೈಜ್ಞಾನಿಕ: ಟೀಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 4:24 IST
Last Updated 24 ಜೂನ್ 2021, 4:24 IST

ಚನ್ನಪಟ್ಟಣ: ‘ತಾಲ್ಲೂಕಿನ 22 ದೇವಸ್ಥಾನಗಳ ಬಳಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ₹5.50 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ್ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕ ಹಾಗೂ ಹಾಸ್ಯಾಸ್ವದ’ ಎಂದು ರಾಮನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಮತ್ತೀಕೆರೆ ಹನುಮಂತಯ್ಯ ಟೀಕಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ತಾಲ್ಲೂಕಿನ ಹಲವು ಗ್ರಾಮಗಳಲ್ಲಿನ ದೇವಾಲಯಗಳು ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಹೆಚ್ಚು ಪ್ರಸಿದ್ಧಿ ಪಡೆದು ಅಪಾರ ಭಕ್ತ ಸಮೂಹವನ್ನು, ಒಕ್ಕಲುತನವನ್ನು ಹೊಂದಿವೆ. ವರ್ಷದ ವಿಶೇಷ ದಿನಗಳಲ್ಲಿ ಮತ್ತು ವಿಶೇಷ ಪೂಜಾ ದಿವಸಗಳಲ್ಲಿ ಅತಿ ಹೆಚ್ಚು ಜನರು ಸೇರುತ್ತಾರೆ. ವಿಶೇಷ ಜಾತ್ರೆಗಳಲ್ಲಂತೂ ಭಕ್ತರ ಸಂಖ್ಯೆ ಇನ್ನೂ
ಹೆಚ್ಚಾಗುತ್ತದೆ. ಇಂತಹ ಕಡೆ ಮಾತ್ರ ಯಾತ್ರಿ ನಿವಾಸ್ ಕಟ್ಟಡ ಅವಶ್ಯಕ’ ಎಂದಿದ್ದಾರೆ.

‘₹5.50 ಕೋಟಿಗಳಲ್ಲಿ ತಾಲ್ಲೂಕಿನ 22 ದೇವಾಲಯಗಳ ಬಳಿ ಯಾತ್ರಿ ನಿವಾಸ್ ನಿರ್ಮಾಣ ಮಾಡಲು ಹೊರಟಿರುವುದು ಯಾರನ್ನು ಮೆಚ್ಚಿಸಲು ಎಂದು ಅರ್ಥವಾಗುತ್ತಿಲ್ಲ. ಒಂದೊಂದು ನಿವಾಸಕ್ಕೆ ₹25 ಲಕ್ಷ ವೆಚ್ಚ ಬರುತ್ತದೆ. ಇಷ್ಟು ಕಡಿಮೆ ಹಣದಲ್ಲಿ ನಿರ್ಮಾಣ ಮಾಡುವ ಯಾತ್ರಿ ನಿವಾಸ್ ಸಮರ್ಪಕ, ಸುಸಜ್ಜಿತ ಹಾಗೂ ಮೂಲ ಸೌಕರ್ಯಗಳಿಂದ ಕೂಡಿದ ಯಾತ್ರಿ ನಿವಾಸವಾಗಲು ಸಾಧ್ಯವಿಲ್ಲ. ಪ್ರಸ್ತುತ ಕಟ್ಟಡ ಸಾಮಾಗ್ರಿಗಳ ಬೆಲೆ ದುಬಾರಿಯಾಗಿದೆ, ಕಾರ್ಮಿಕರ ಕೂಲಿಯೂ ಸಹ ಹೆಚ್ಚಾಗಿದೆ, ಈ ಹಿನ್ನೆಲೆಯಲ್ಲಿ ಸಮರ್ಪಕವಾದ ಕಟ್ಟಡ ಸಾಧ್ಯವಾಗುವುದಿಲ್ಲ’ ಎಂದು ಅವರು ಟೀಕಿಸಿದ್ದಾರೆ.

ADVERTISEMENT

‘ಇದರ ಬದಲಾಗಿ ತಾಲ್ಲೂಕಿನ ಅತಿ ಹೆಚ್ಚು ಭಕ್ತ ಸಮೂಹ ಹೊಂದಿರುವ ಹಾಗೂ ಅದರದೆ ಆದ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯುಳ್ಳ ಐದಾರು ಕಡೆ ತಲಾ ₹1 ಕೋಟಿಯಲ್ಲಿ ಎಲ್ಲಾ ಮೂಲ ಸೌಕರ್ಯಗಳಿಂದ ಕೂಡಿದ ಯಾತ್ರಿ ನಿವಾಸ್ ಕಟ್ಟಣ ನಿರ್ಮಾಣ ಮಾಡಿದರೆ ಅದು ಸಾರ್ಥಕವಾಗುತ್ತದೆ’ ಎಂದು ಅವರು ಸಲಹೆ ನೀಡಿದ್ದಾರೆ.

‘ಐದು ದೇವಾಲಯಗಳನ್ನು ಗುರ್ತಿಸಿ ಅಲ್ಲಿ ಸುಸಜ್ಜಿತವಾದ, ಎಲ್ಲ ಮೂಲ ಸೌಕರ್ಯಗಳಿಂದ ಕೂಡಿದ ಯಾತ್ರಿ ನಿವಾಸ್ ಗಳನ್ನು ನಿರ್ಮಿಸಿ ಸಾರ್ವಜನಿಕರು ಹಾಗೂ ತಾಲ್ಲೂಕಿನ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಹನುಮಂತಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.