ADVERTISEMENT

ನನ್ನ ಬಿಪಿ, ಶುಗರ್ ಏರಿಸುತ್ತಿದ್ದೀರಿ: ಶಾಸಕ ಇಕ್ಬಾಲ್ ಹುಸೇನ್ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:57 IST
Last Updated 15 ಅಕ್ಟೋಬರ್ 2025, 2:57 IST
ರಾಮನಗರದ ರಂಗರಾಯರದೊಡ್ಡಿ ಕೆರೆಗೆ ಮಂಗಳವಾರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಬಾಗಿನ ಅರ್ಪಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರು ಹಾಗೂ ಇತರರು ಇದ್ದಾರೆ
ರಾಮನಗರದ ರಂಗರಾಯರದೊಡ್ಡಿ ಕೆರೆಗೆ ಮಂಗಳವಾರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಬಾಗಿನ ಅರ್ಪಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರು ಹಾಗೂ ಇತರರು ಇದ್ದಾರೆ   

ರಾಮನಗರ: ‘ನೀವು ನನಗೆ ಬಿಪಿ ಮತ್ತು ಶುಗರ್ ಏರಿಸುತ್ತಿದ್ದೀರಿ! ಮತ್ತೆ ಮತ್ತೆ ಆ ವಿಚಾರ ಕೆಣಕಿದ್ರೆ ನಾನು ಬಾಯಿ ಬಿಟ್ಟು ಬಿಡುವೆ. ಆ ಬಗ್ಗೆ ಕೇಳಲೇಬೇಡಿ. ಅಭಿವೃದ್ಧಿ ಕುರಿತು ಮಾತ್ರ ಕೇಳಿ. ಶಿಸ್ತು ಪಾಲನೆ ಎಂದು ಪಕ್ಷ ನಮಗೆ ಲಗಾಮು ಹಾಕಿದೆ...’ – ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ನವೆಂಬರ್ ಕ್ರಾಂತಿ ಕುರಿತು ನಡೆಯುತ್ತಿರುವ ಚರ್ಚೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಿಡಿಮಿಡಿಗೊಂಡಿದ್ದು ಹೀಗೆ.

ಮಳೆಗೆ ತುಂಬಿ ಹರಿಯುತ್ತಿರುವ ನಗರದ ರಂಗರಾಯರದೊಡ್ಡಿ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಅವರು ನಮಗೆ ಸಿಎಂ ಇದ್ದಂತೆ. ಅಭಿವೃದ್ಧಿ ಕೆಲಸಕ್ಕೆ ನನಗೆ ಸಿಎಂ ಮತ್ತು ಡಿಸಿಎಂ ಇಬ್ಬರ ಆಶೀರ್ವಾದವೂ ಇದೆ’ ಎಂದರು.

‘ಮುಖ್ಯಮಂತ್ರಿಯಾಗಲು ಶಾಸಕರ ಸಂಖ್ಯಾಬಲ ಬೇಕೆಂಬ ಚರ್ಚೆ ಜೋರಾಗಿದೆ. ಈ ಕುರಿತು ನಾನು ಈಗಾಗಲೇ ನನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದೇನೆ. ಈಗಾಗಲೇ ಅದು ದೊಡ್ಡ ಸುದ್ದಿ ಸಹ ಆಗಿದೆ. ಮತ್ತೆ ಆ ವಿಷಯವನ್ನು ನಾನು ಚರ್ಚಿಸುವುದಿಲ್ಲ. ಆ ವಿಷಯ ಚರ್ಚಿಸದಂತೆ ಪಕ್ಷದ ಹೈಕಮಾಂಡ್ ಆದೇಶ ನೀಡಿದ್ದು, ಅದನ್ನು ಪಾಲಿಸುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ಕೆಲವು ಬಾರಿ ಹೊಗಳುವುದು ಮತ್ತು ತೆಗಳುವುದು ಮಾಡುತ್ತಲೇ ಇರುತ್ತಾರೆ. ಬೇಕಾದಾಗ ಪ್ರೀತಿ ಮಾಡುವುದು, ಬೇಡವಾದಾಗ ಬಿಡುವುದು ಅವರ ಸ್ವಭಾವ’ ಎಂದು ವ್ಯಂಗ್ಯವಾಡಿದರು.

ಬಾಗಿನ ಅರ್ಪಿಸಿದ ಬಳಿಕ ಹುಸೇನ್ ಅವರು ವಾಟರ್ ಸ್ಕೂಟರ್‌ ರೈಡ್ ಮಾಡಿ ಗಮನ ಸೆಳೆದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ನಿಜಾಮುದ್ದೀನ್ ಷರೀಫ್, ಸಮದ್, ಭೈರೇಗೌಡ, ವಿಜಯಕುಮಾರಿ, ಗಿರಿಜಮ್ಮ, ನಾಗಮ್ಮ, ಸೋಮಶೇಖರ್ ಮಣಿ, ಪೌರಾಯುಕ್ತ ಡಾ. ಜಯಣ್ಣ, ಪ್ರವಾಸೋದ್ಯ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.