ADVERTISEMENT

ಠಾಣೆ ಪಕ್ಕದಲ್ಲೇ ಯುವಕ ನೇಣಿಗೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 16:18 IST
Last Updated 3 ಜುಲೈ 2018, 16:18 IST

ಕನಕಪುರ: ನಗರದ ಪುರ ಪೊಲೀಸ್‌ ಠಾಣೆ ಪಕ್ಕದಲ್ಲೇ ನಾಗರಾಜು (32) ಎಂಬ ಯುವಕ ಜರ್ಕಿನ್‌ ನಿಂದ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿವಿಲ್‌ ಎಂಜಿನಿಯರ್‌ ಆದ ಅವರು ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿಯವರು. ತಂದೆ ಮೃತಪಟ್ಟ ನಂತರ ತಾಯಿ ಮಹಾಲಕ್ಷ್ಮಿ ಅವರೊಂದಿಗೆ ಬೆಂಗಳೂರಿನ ಜಿಗಣಿಯಲ್ಲಿ ನೆಲೆಸಿದ್ದು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ.

ಸೋಮವಾರ ಬೆಳಿಗ್ಗೆ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಸಹಾಯಕನಿಗೆ ಹೊರಗಡೆ ಹೋಗುವುದಾಗಿ ಹೇಳಿ ಹೊರಟಿದ್ದಾರೆ. ಕನಕಪುರದ ಪೊಲೀಸ್‌ ಠಾಣೆ ಪಕ್ಕದಲ್ಲಿನ ಹಳೆ ಮುನಿಸಿಪಲ್‌ ಕಟ್ಟಡದ ಮರದ ಜಂತಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.

ADVERTISEMENT

ರಸ್ತೆಯಲ್ಲಿ ಹೋಗುತ್ತಿದ್ದವರು ಶವ ನೇತಾಡುವುದನ್ನು ಗಮನಿಸಿ ಪೊಲೀಸ್‌ ಠಾಣೆಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೇಣು ಬಿಗಿದುಕೊಂಡಿದ್ದ ವ್ಯಕ್ತಿಯ ಕುಣಿಕೆಯನ್ನು ಕತ್ತರಿಸಿ ಕೆಳಕ್ಕೆ ಇಳಿಸಿದ್ದಾರೆ. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತರಿಗೆ ವಿವಾಹ ನಿಶ್ಚಯವಾಗಿದ್ದು ಎರಡು ತಿಂಗಳಲ್ಲಿ ಮದುವೆ ನಡೆಯಬೇಕಿತ್ತು. ವಿವಾಹಕ್ಕೆ ಸಂಬಂಧಿಸಿದಂತೆ ಸಮಸ್ಯೆಯಿತ್ತು. ಆ ಕಾರಣದಿಂದ ಅವರು ಕನಕಪುರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಅಣ್ಣನಿಗೆ ಮಂಗಳವಾರ ಬೆಳಿಗ್ಗೆ ದೂರವಾಣಿ ಕರೆ ಮಾಡಿ ಪೊಲೀಸ್‌ ಠಾಣೆಯ ಪಕ್ಕದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಹೆಣವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತರ ಸಂಬಂಧಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಮಲ್ಲೇಶ್‌, ಎಸ್‌.ಐ. ಅನಂತರಾಮ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.