ADVERTISEMENT

ಯುವಜನ ಕೃಷಿ ಧರ್ಮದ ದೀಕ್ಷೆ ಸ್ವೀಕರಿಸಬೇಕಿದೆ: ಸಿ. ಪುಟ್ಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 2:14 IST
Last Updated 1 ನವೆಂಬರ್ 2025, 2:14 IST
<div class="paragraphs"><p>ರಾಮನಗರದ ಐಜೂರಿನಲ್ಲಿರುವ ನ್ಯೂ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ‘ಕೃಷಿ: ಯುವಜನತೆ ಭಾಗವಹಿಸುವಿಕೆಯ ಪ್ರಸ್ತುತ ಸನ್ನಿವೇಶಗಳು’ ವಿಷಯ ಕುರಿತ ವಿಚಾರ ಸಂಕಿರಣವನ್ನು ರಾಮನಗರ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ ಉದ್ಘಾಟಿಸಿದರು. </p></div>

ರಾಮನಗರದ ಐಜೂರಿನಲ್ಲಿರುವ ನ್ಯೂ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ‘ಕೃಷಿ: ಯುವಜನತೆ ಭಾಗವಹಿಸುವಿಕೆಯ ಪ್ರಸ್ತುತ ಸನ್ನಿವೇಶಗಳು’ ವಿಷಯ ಕುರಿತ ವಿಚಾರ ಸಂಕಿರಣವನ್ನು ರಾಮನಗರ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ ಉದ್ಘಾಟಿಸಿದರು.

   

ರಾಮನಗರ: ‘ದುಡಿಮೆಯ ಧರ್ಮ ಎನಿಸಿರುವ ಕೃಷಿ ದೀಕ್ಷೆಯನ್ನು ಯುವಜನರು ಸ್ವೀಕರಿಸಬೇಕಿದೆ. ಪ್ರತಿಯೊಬ್ಬರ ಮೂಲವೂ ಕೃಷಿಯೇ ಆಗಿರುವುದರಿಂದ, ಅನ್ನ ತಿನ್ನುವವರೆಲ್ಲರೂ ಕೃಷಿ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕಿದೆ. ಆಗ ಮಾತ್ರ ಕೃಷಿ ಕ್ಷೇತ್ರ ಇಂದು ಎದುರಿಸುತ್ತಿರುವ ಗಂಭೀರ ಬಿಕ್ಕಟ್ಟುಗಳಿಗೆ ಪರಿಹಾರ ಸಿಗಲಿದೆ’ ಎಂದು ರೈತ ಸಂಘದ ಹಿರಿಯ ಮುಖಂಡ ಸಿ. ಪುಟ್ಟಸ್ವಾಮಿ ಹೇಳಿದರು.

ನಗರದ ಐಜೂರಿನಲ್ಲಿರುವ ನ್ಯೂ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ‘ಕೃಷಿ: ಯುವಜನತೆ ಭಾಗವಹಿಸುವಿಕೆಯ ಪ್ರಸ್ತುತ ಸನ್ನಿವೇಶಗಳು’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಸಾವಯವ, ನೈಸರ್ಗಿಕ ಹಾಗೂ ಸುಸ್ಥಿರ ಕೃಷಿ ಪದ್ಧತಿಯಂತಹ ಪ್ರಯೋಗಶೀಲತೆಗೆ ಯುವಜನರು ಮುಂದಾಗಬೇಕು’ ಎಂದರು.

ADVERTISEMENT

‘ಬೇರೆ ನೌಕರಿಗಳಲ್ಲಿ ಸೋಮಾರಿತನ ಮಾಡಿದರೂ ಪ್ರತಿ ತಿಂಗಳು ಸಂಬಳ ಬರುತ್ತದೆ. ಅಕಾಲಿಕ ನಿಧನವಾದರೆ ಅಥವಾ ನಿವೃತ್ತರಾದರೆ ಪರಿಹಾರ ಅಥವಾ ಪಿಂಚಣಿ ಬರುತ್ತದೆ. ಆದರೆ, ಕೃಷಿ ಸೋಮಾರಿತನ ತೋರಲಾಗದ ಕ್ಷೇತ್ರ. ಯಾವಾಗ ಏನು ಕೆಲಸ ಮಾಡಬೇಕೊ, ಅದನ್ನು ಮಾಡಲೇಬೇಕು. ತಪ್ಪಿದರೆ ಬೆಳೆ ಕೈ ಸೇರದೆ ನಷ್ಟ ಅನುಭವಿಸಬೇಕು. ರೈತ ಸತ್ತರೆ ಪರಿಹಾರ ಅಥವಾ ಪಿಂಚಣಿ ಬರುವುದಿಲ್ಲ’ ಎಂದು ತಿಳಿಸಿದರು.

‘ಇಂದಿಗೂ ರೈತರು ಎಪಿಎಂಸಿ ಸೇರಿದಂತೆ ಇತರೆಡೆಗೆ ಬೆಳೆಗಳನ್ನು ಕೊಂಡೊಯ್ದಾಗ ಹರಾಜು ಹಾಕಿ ಖರೀಸುತ್ತಾರೆ. ಬೆಲೆ ಸಿಗದಿದ್ದಾಗ ರೈತರು ಬೆಳೆಗಳನ್ನು ಬೀದಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಮಾರುಕಟ್ಟೆ ಏಜೆಂಟರು, ಮಧ್ಯವರ್ತಿಗಳ ಸಿರಿತನ ಮಾತ್ರ ಹೆಚ್ಚುತ್ತಲೇ ಇದೆ’ ಎಂದರು.

‘ಕೃಷಿ ಮತ್ತು ರೈತರ ಪರವಾಗಿ ಕೃಷಿ ವಿಜ್ಞಾನಿ ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಸೇರಿದಂತೆ ಹಲವು ಕೃಷಿಪರ ಅಂಶಗಳನ್ನು ಒಳಗೊಂಡ ವರದಿ ಕೊಟ್ಟು ಎರಡೂವರೆ ದಶಕವಾದರೂ ಇದುವರೆಗೆ ಸರ್ಕಾರಗಳು ಅದನ್ನು ಜಾರಿಗೆ ತರಲು ಆಸಕ್ತಿ ತೋರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈತರನ್ನು ನಷ್ಟದ ಕೂಪಕ್ಕೆ ಬೀಳಲು ಬಿಡದೆ ಆತನ ಬೆನ್ನಿಗೆ ನಿಲ್ಲುವ ಸರ್ಕಾರಗಳು ಬೇಕಿವೆ‌‌. ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ದೇಶದ ಪ್ರಮುಖ ನೀತಿಯಾಗಬೇಕು. ಅದಾಗದ ಹೊರತು, ಕೃಷಿ ಕ್ಷೇತ್ರದ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಆಳುವ ವರ್ಗಗಳು ಚಿಂತನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮನಗರ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಶಿವಣ್ಣ, ಪರಿಷತ್ತಿನ ನಂಜುಂಡಿ ಬಾನಂದೂರು, ಬಿ.ಟಿ. ರಾಜೇಂದ್ರ, ಪದವಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕರು ಹಾಗೂ ರೈತ ಮುಖಂಡರು ಇದ್ದರು.‌ ಉಪನ್ಯಾಸಕ ದಯಾನಂದ ಸ್ವಾಮಿ ನಿರೂಪಣೆ ಮಾಡಿದರು. ವಿನಯ್ ಕುಮಾರ್ ಗಾಯನ ನಡೆಸಿ ಕೊಟ್ಟರು.

‘ಸಮಸ್ಯೆ ನಿವಾರಣೆಗೆ ಗಂಭೀರ ಚಿಂತನೆ ಅಗತ್ಯ’

‘ಯುವಜನರು ಕೃಷಿ ಮತ್ತು ಕೃಷಿಕರತ್ತ ಗಮನ ಹರಿಸಬೇಕು. ನಮ್ಮೆಲ್ಲರ ಮೂಲ ಕೃಷಿ.‌ ಹಾಗಾಗಿ ಈ ಕ್ಷೇತ್ರದ ಬಿಕ್ಕಟ್ಟುಗಳ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತನೆ ನಡೆಸಬೇಕು. ಆಳುವ ಸರ್ಕಾರಗಳು ಸಹ ಈ ಬಿಕ್ಕಟ್ಟುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಆಧುನಿಕ ಕೃಷಿಗೆ ಪರ್ಯಾಯವಾದ ಕೃಷಿ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ವಿಚಾರ ಸಂಕಿರಣ ಉದ್ಘಾಟಿಸಿದ ರಾಮನಗರ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ ಹೇಳಿದರು.

ಇಂದಿನ ಕೃಷಿ ಬಿಕ್ಕಟ್ಟು ಗಮನಿಸಿದರೆ ಮುಂದೆ ಆಹಾರ ಧಾನ್ಯಗಳ ಕೊರತೆಯ ಆತಂಕ ಎದುರಾಗಿದೆ. ಅದಕ್ಕೆ ಈಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕು. ನಮ್ಮ ಮೂಲ ಕಸುಬಾದ ಕೃಷಿ ಬಗ್ಗೆ ಯುವಜನರು ಹಿರಿಮೆ ಬೆಳೆಸಿಕೊಳ್ಳಬೇಕು
– ಡಾ. ಡಿ.ಆರ್. ರವಿಕುಮಾರ್, ಸಂಸ್ಥಾಪಕ ಕಾರ್ಯದರ್ಶಿ, ನ್ಯೂ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳು ರಾಮನಗರ
ರಸಗೊಬ್ಬರಗಳು ಕೀಟನಾಶಕಗಳು ಔಷಧಗಳ ವಿಪರೀತ ಬಳಕೆಯಿಂದಾಗಿ ಭೂಮಿ ದಿನದಿಂದ ದಿನಕ್ಕೆ ಸತ್ವ ಕಳೆದುಕೊಳ್ಳುತ್ತಿದೆ. ಬೆಳೆಗಳಲ್ಲಿ ವಿಷಕಾರಿ ಅಂಶಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಪರ್ಯಾಯವಾದ ವ್ಯವಸ್ಥೆಗೆ ಒತ್ತು ನೀಡಬೇಕಿದೆ
– ಬಿ.ಟಿ. ನಾಗೇಶ್, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.