ಮಾಗಡಿ: ತಾಲ್ಲೂಕಿನ ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನದ ಆವರಣದಲ್ಲಿ ಗುರುಪೂರ್ಣಿಮಾ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಅವರು ಆರ್ಶೀವಚನ ನೀಡಿದರು.
ಈ ವೇಳೆ ಮಾತನಾಡಿದ ಅವರು, ಇಂದಿನ ಪೀಳಿಗೆಯ ಯುವಜನತೆ ತಂತ್ರಜ್ಞಾನದ ಯುಗದಲ್ಲಿ ಪೂರ್ವಜರ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗುರುಪೂರ್ಣಿಮಾ ಹಿಂದೂ ಸಂಸ್ಕೃತಿಯಲ್ಲಿ ಮಹತ್ತರ ಸ್ಥಾನ ಪಡೆದಿದ್ದು, ಅನೇಕ ಸಾಕ್ಷಿಗಳಿವೆ. ಮಹಾಭಾರತದ ಅರ್ಜುನ-ದ್ರೋಣಚಾರ್ಯರಿಂದ ಹಿಡಿದು, ಸ್ವಾಮಿ ವಿವೇಕಾನಂದ- ರಾಮಕೃಷ್ಣ ಪರಮಹಂಸರವರೆಗೂ ಈ ನಾಡಿನಲ್ಲಿ ಗುರುಗಳಿಗೆ ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡು, ಗುರುಗಳ ಜ್ಞಾನ ಭಂಡಾರವನ್ನು ಸ್ವೀಕರಿಸಿದ್ದಾರೆ. ಅವರ ಮಾರ್ಗವನ್ನು ಅನುಸರಿಸಿ ಮುಕ್ತಿ ಹೊಂದಿರುವ ಅನೇಕ ಘಟನೆಗಳು ನಮ್ಮ ಇತಿಹಾಸದಲ್ಲಿ ಸಾಕಷ್ಟಿವೆ ಎಂದರು.
ಮನುಷ್ಯನ ಮುಕ್ತಿ ಹೊಂದಬೇಕಾದರೆ ಗುರುವಿನ ಆರ್ಶೀವಾದ ಸಿಗಬೇಕು. ಗುರುಗಳು ತಮ್ಮ ಶಿಷ್ಯ ಉತ್ತಮ ವ್ಯಕ್ತಿಯಾಗಬೇಕೆಂಬ ಆಶಯ ಹೊಂದಿರುತ್ತಾರೆ. ಜೊತೆಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಜ್ಞಾನ ಭಂಡಾರವನ್ನು ಶಿಷ್ಯರಿಗೆ ಧಾರೆಯೆರೆಯುತ್ತಾರೆ ಎಂದರು.
ಅದೇ ರೀತಿ ಆರ್ಯ ಈಡಿಗ ಮಹಾಸಂಸ್ಥಾನವು ಸಮಾಜದ ಪ್ರತಿಯೊಬ್ಬ ಮಗುವಿಗೂ ಸಮಾನ ಶಿಕ್ಷಣ ದೊರೆಯಬೇಕೆಂದು ಮಠದಲ್ಲಿ ವಸತಿ ಜೊತೆಗೆ ಶಿಕ್ಷಣ ನೀಡಲು ಮುಂದಾಗಿದೆ ಎಂದರು.
ಕುದೂರು ವೆಂಕಟೇಶ್ ಮಾತನಾಡಿ, ಗುರುಪೂರ್ಣಿಮಾ ದಿನದಂದು ಸ್ವಾಮೀಜಿಗಳ ಆಶೀರ್ವಾದ ಪಡೆದು ಅವರ ಮಾರ್ಗದರ್ಶನದಲ್ಲಿ ನಡೆದಾಗ ಜೀವನ ಉತ್ತಮ ಮಾರ್ಗದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯುವ ಮುಖಂಡ ಶಶಾಂಕ್ ಮಾತನಾಡಿ, ಗುರುಗಳು ಕೇವಲ ಶಿಕ್ಷಕರು ಮಾತ್ರವಲ್ಲ. ಅವರು ನಮ್ಮ ಬದುಕಿನ ದಾರಿ ತೋರುವ ಮಾರ್ಗದರ್ಶಕರು. ನಮ್ಮ ತಪ್ಪುಗಳನ್ನು ತಿದ್ದುತ್ತಾ ಅಜ್ಞಾನದಿಂದ ಸುಜ್ಞಾನದ ಬೆಳಕಿನತ್ತ ತರುವವರು ಎಂದರು.
ಗುರುಪೂರ್ಣಿಮಾ ಅಂಗವಾಗಿ ಮಠದಲ್ಲಿ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ, ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ವಿಖ್ಯಾತಾನಂದ ಸ್ವಾಮೀಜಿಗೆ ಭಕ್ತರು ಗುರುವಂದನೆ ಸಲ್ಲಿಸಿದರು.
ಈ ವೇಳೆ ಹರ್ಷಣೆಕಲ್ ಧರ್ಮ ವಿಜಯ, ಕೆ.ವಿ ಹರೀಶ್, ತುಮಕೂರು ಶಿವಣ್ಣ, ಆಂಜನೇಯಲು, ಮಾಗಡಿ ಗೋಪಾಲ್, ಮಠದ ಆಡಳಿತಾಧಿಕಾರಿ ಸಂತೋಷ್ ಸೇರಿದಂತೆ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.