ADVERTISEMENT

ಅಂಬೇಡ್ಕರ್ ಚಿಂತನೆಯ ಸಾಮಾಜಿಕ ವ್ಯವಸ್ಥೆ ನಿರ್ಮಿಸಿ

ಎಲ್ಲೆಡೆ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಪುಷ್ಪನಮನ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 6:21 IST
Last Updated 15 ಏಪ್ರಿಲ್ 2013, 6:21 IST
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಚಿತ್ರದಲ್ಲಿದ್ದಾರೆ
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಚಿತ್ರದಲ್ಲಿದ್ದಾರೆ   

ಶಿವಮೊಗ್ಗ: ನಗರದ ವಿವಿಧೆಡೆ ಭಾನುವಾರ ಅಂಬೇಡ್ಕರ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲಾಡಳಿತ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೊಲೀಸ್ ವರಿಷ್ಠಾಧಿಕಾರಿ ವಿಪುಲ್ ಬನ್ಸಾಲ್, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಇದ್ದರು.
 
ಯೋಜನೆಗಳು ದಲಿತರನ್ನು ತಲುಪುತ್ತಿಲ್ಲ
ಅಧಿಕಾರದ ಗದ್ದುಗೆಯಲ್ಲಿ ಕುಳಿತವರು ರೂಪಿಸಿದ ದಲಿತರ ಉದ್ಧಾರದ ಯೋಜನೆಗಳು ಕಡೆಕೇರಿಗಳನ್ನು ತಲುಪುತ್ತಿಲ್ಲ ಎಂದು ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.

ನಗರದ ಪಾರ್ಕ್‌ಬಡಾವಣೆ ಡಿಎಸ್‌ಎಸ್ ಕೇಂದ್ರ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳು ಕಡೆಯ ಕೇರಿಗಳನ್ನು ತಲುಪುತ್ತಿಲ್ಲ. ಇದರಿಂದ ದಲಿತರ ಅಭಿವೃದ್ಧಿ ಆಗುತ್ತಿಲ್ಲ ಎಂದ ಅವರು, ಸ್ವಾತಂತ್ರ್ಯ ಸಮಾನತೆ ಘೋಷಣೆಗಳು  ಒಂದು ವರ್ಗದ ಪಾಲಾಗುತ್ತಿವೆ. ಆದರೆ, ಸಮಾಜದಲ್ಲಿ ಎಲ್ಲರ ಅಭಿವೃದ್ಧಿ ಸಮಾನವಾಗಿ ಆಗಬೇಕಿದೆ ಎಂದರು.

ಏ. 14 ಕೇವಲ ಕ್ಯಾಲೆಂಡರ್‌ನಲ್ಲಿ ಗುರುತಾದ ದಿನಾಂಕ ಅಷ್ಟೆ ಅಲ್ಲ. ಸಾವಿರ ಕನಸುಗಳಿಂದ ಕೂಡಿದ ಅದರ್ಶ ಸಮಾಜ ಕಟ್ಟಲು ಜನಿಸಿದ ಅಂಬೇಡ್ಕರ್ ಅವರ ಜನ್ಮದಿನ. ಅವರ ಚಿಂತನೆಗಳಂತೆ ಸಾಮಾಜಿಕ ವ್ಯವಸ್ಥೆ ನಿರ್ಮಾಣ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ  ಟಿ.ಎಚ್. ಹಾಲೇಶಪ್ಪ, ನಗರ ಸಂಚಾಲಕ ಹರಿಗೆ ರವಿ, ಲೋಕನಾಥ್, ಹುಣಸೋಡು ಶೇಷಪ್ಪ, ಸ್ಪಂದನ ಚಂದ್ರು, ಶಿವಕುಮಾರ್, ಮತ್ತೂರು ವೇಲು, ಬಿ.ಕೆ. ಹನುಮಂತಪ್ಪ, ಚಿಕ್ಕಲ್ ಸುರೇಶ್ ಉಪಸ್ಥಿತರಿದ್ದರು.

ರಕ್ತದಾನ: ಪಂಚವಟಿ ಕಾಲೊನಿಯ ಮಧುಕೃಪಾದಲ್ಲಿ ವಿಕಾಸಟ್ರಸ್ಟ್ ಮತ್ತು ಯೋಗ ಶಿಕ್ಷಣ ಸಮಿತಿ ಅಂಬೇಡ್ಕರ್ ಜಯಂತಿ ಅಂಗವಾಗಿ ರಂಗೋಲಿ ಸ್ಪರ್ಧೆ ಹಾಗೂ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ತುಂಗಾ ಮಹಾವಿದ್ಯಾಲಯದ ಪ್ರಾದ್ಯಾಪಕ ಡಾ.ಎಚ್. ಆಂಜನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸು. ರಾಮಣ್ಣ, ಟ್ರಸ್ಟ್ ಅಧ್ಯಕ್ಷ ಡಿ.ಎಚ್. ಸುಬ್ಬಣ್ಣ ಹಾಜರಿದ್ದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಜ್ಞಾನೇಶ್ವರ್, ನಗರಸಭೆ ಸದಸ್ಯ ಎಸ್. ರಮೇಶ್ ಇದ್ದರು.

ರಕ್ತದಾನ ಶಿಬಿರ
ಹೊಳೆಹೊನ್ನೂರು: ಸಮೀಪದ ಮಂಗೋಟೆ ಗ್ರಾಮದ ಡಾ.ಅಂಬೇಡ್ಕರ್ ಸೇವಾ ಸಂಘ, ಗ್ರಾಮ ಪಂಚಾಯ್ತಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಿಂದ ಅಂಬೇಡ್ಕರ್ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸುಮಾರು 50 ಜನ ರಕ್ತ ದಾನ ಮಾಡಿದರು. ನಂತರ ಆ ರಕ್ತವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾನ ಕೊಡಲಾಯಿತ್ತು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.  

ಶ್ರಮಜೀವಿ
ರಿಪ್ಪನ್‌ಪೇಟೆ: ಪ್ರತಿಯೊಬ್ಬರಿಗೂ ಸಮಾನತೆಯನ್ನು ಬಯಸಿದ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬ ಶ್ರಮಿಕ. ಅವರ ದೂರ ದೃಷ್ಟಿತ್ವದ ಯೋಜನೆಗಳು ಇಂದಿಗೂ ಪ್ರಸ್ತುತ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್. ಚಂದ್ರೇಶ್ ಹೇಳಿದರು.

ಪಟ್ಟಣದ ಗ್ರಾಮ ಪಂಚಾಯ್ತಿ ಅವರಣದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕೆ. ಮುದ್ದುಭಂಡಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಕೆರೆಹಳ್ಳಿ ರವೀಂದ್ರ. ಸೀತಮ್ಮ, ಗೌರಮ್ಮ, ಮಧು ಸೂಧನ್ ಕಾರ್ಯದರ್ಶಿ ಸುರೇಶ್ ಹಾಗೂ ನಾಗೇಶ್ ಹಾಜರಿದ್ದರು.

ಡಿಇ.ಡಿ ಕಾಲೇಜು: ಇಲ್ಲಿನ ಗುರು ನಾರಾಯಣ ಡಿಇ.ಡಿ ಕಾಲೇಜಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ  ಜಯಂತಿ ಆಚರಿಸಿದರು.
ಕಾರ್ಯದರ್ಶಿ ಎಂ. ಧರ್ಮಪ್ಪ ಇದ್ದರು. ಪ್ರಾಂಶುಪಾಲ ಬಿ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿದ್ದರು.

ಅರಸಾಳಿನ ಸಂಗೀತ ವಿದ್ವಾನ್ ಕೆ.ಎಂ. ಕೃಷ್ಣಮೂರ್ತಿ ಹಾಗೂ ಶಂಕರೇಶ್ವರ ಹವ್ಯಾಸಿ ಮಹಿಳಾ ಜಾನಪದ ಕಲಾ ತಂಡ ಮಸ್ಕಾನಿ ಇವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.