ADVERTISEMENT

ಅದ್ದೂರಿ ಗಣೇಶ ವಿಸರ್ಜನೆಗೆ ಕಲಾ ಮೆರುಗು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 5:55 IST
Last Updated 17 ಸೆಪ್ಟೆಂಬರ್ 2011, 5:55 IST
ಅದ್ದೂರಿ ಗಣೇಶ ವಿಸರ್ಜನೆಗೆ ಕಲಾ ಮೆರುಗು
ಅದ್ದೂರಿ ಗಣೇಶ ವಿಸರ್ಜನೆಗೆ ಕಲಾ ಮೆರುಗು   

ಶಿಕಾರಿಪುರ: ಕುಂಜಬೆಟ್ಟು ಹುಲಿ ವೇಶದ ಅತ್ಯಾಕರ್ಷಕ ನೃತ್ಯದೊಂದಿಗೆ ಪಟ್ಟಣದ ದೊಡ್ಡಪೇಟೆ ಅರುಣೋದಯ ತರುಣ ಸಂಘ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನೆ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಿಂದ ಜರುಗಿತು.

ಗಣೇಶನ ರಾಜಬೀದಿ ಉತ್ಸವ ಬೆಳಿಗ್ಗೆ 6ಕ್ಕೆ ಪ್ರಾರಂಭವಾಗಿ ದೊಡ್ಡಪೇಟೆ, ಮಾಸೂರು ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಜಿ.ಎಸ್. ಶಿವರುದ್ರಪ್ಪ ರಸ್ತೆ, ಮುಖಾಂತರ ತೇರುಬೀದಿಯಲ್ಲಿ ಸಾಗಿ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಉಡುಪಿ ಕುಂಜಬೆಟ್ಟು ಹುಲಿವೇಶ ನೃತ್ಯ, ಕುಸ್ಕೂರು ಡೊಳ್ಳುಕುಣಿತ, ಕಂಪ್ಲಿ ಟ್ರಮ್‌ಸೆಟ್, ಚಿಲಿಪಿಲಿ ಗೊಂಬೆ, ಸಾಗರ ಮಹಿಳಾ ಡೊಳ್ಳುಕುಣಿತ, ಚಿಟ್ಟೂರು ಭಜನೆಮೇಳ, ಕೀಲು ಕುದುರೆ ಸೇರಿದಂತೆ 15ಕ್ಕೂ ಹೆಚ್ಚು ಕಲಾತಂಡಗಳ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾದವು.

ಹಿರಿಯರು, ಮಕ್ಕಳೆನ್ನದೆ ಸಾರ್ವಜನಿಕರು ಕಲಾತಂಡಗಳೊಂದಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮರವಣಿಗೆ ನಡೆಯುವ ಬೀದಿಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡು ಶಾಂತರೀತಿಯಿಂದ ಗಣೇಶ ವಿಸರ್ಜನೆ ನಡೆಯಲು ಕ್ರಮಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.