ADVERTISEMENT

ಅದ್ದೂರಿ ರಥೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 5:55 IST
Last Updated 16 ಮಾರ್ಚ್ 2012, 5:55 IST

ರಿಪ್ಪನ್‌ಪೇಟೆ: ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊಂಬುಜ ಕ್ಷೇತ್ರದಲ್ಲಿ ಸಹಸ್ರಾರು ಭಕ್ತ ಸಾಗರದ ನಡುವೆ ಗುರುವಾರ ಮೂಲಾನಕ್ಷತ್ರ ದಿವಸ ಮಧ್ಯಾಹ್ನ 1.20ಕ್ಕೆ ಸರಿಯಾಗಿ ಮಹಾ ರಥೋತ್ಸವಕ್ಕೆ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಚಾಲನೆ ನೀಡಿದರು.

ಶೃಂಗಾರಗೊಂಡ ರಥದಲ್ಲಿ ಮಾತೆ ಪದ್ಮಾವತಿ ದೇವಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆಯೇ ರಾಜ್ಯ ಹಾಗೂ ಹೊರರಾಜ್ಯಗಳಿಂದ ನೆರೆದ ಭಕ್ತ ಸಮೂಹವೂ ಬಿಸಿಲ ಝಳವನ್ನೂ ಲೆಕ್ಕಿಸದೇ ಬರಿಗಾಲಿನಲ್ಲಿ ನಿಂತು ಪದ್ಮಾವತಿ ದೇವಿ ಕೀ.. ಜೈ, ಪಾರ್ಶ್ವನಾಥ ಸ್ವಾಮೀಜಿ ಕೀ.. ಜೈ, ಭಗವಾನ್ ಬಾಹುಬಲಿ ಕೀ... ಜೈ ಎಂಬ ಭಕ್ತರ ಉದ್ಘೋಷಗಳು ಮುಗಿಲು ಮುಟ್ಟಿದವು.

ಬೆಳಿಗ್ಗೆಯಿಂದಲೇ ಆರಂಭಗೊಂಡ ದೇವಿಯ ವಿಶೇಷ ಪೂಜೆ ಮುಗಿದು ದೇವಳದ ವರಾಂಡದ ಸುತ್ತ ದೇವಿಯ ಉತ್ಸವ ಮೂರ್ತಿಯು ಪ್ರದಕ್ಷಣೆ ಹಾಕಿದ ಮೇಲೆ ಶ್ರೀಮದ್ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮಿಜಿ ಅವರ ನೇತೃತ್ವದಲ್ಲಿ ಪದ್ಮಾವತಿ ದೇವಿ 60 ಅಡಿ ಎತ್ತರದ ರಥಾರೋಹಣ ಗೈಯುತ್ತಿದ್ದಂತೆ ಶ್ರೀಮಠದ ಗಜರಾಜ ಘೀಳಿಟ್ಟು ನಮಸ್ಕರಿಸಿದ ಪರಿ ನೋಡುಗರ ಮೈ ರೋಮಾಂಚನಗೊಂಡಿತ್ತು.

ನಂತರ, ಆಶೀರ್ವಚನ ನೀಡಿದ ಸ್ವಾಮೀಜಿ ಅವರು ಸಕಲ ಜೀವರಾಶಿಯಲ್ಲಿ ಏಕತೆಯನ್ನು ಕಾಣುವ ಹಾಗೂ ಶಾಂತಿ ಪ್ರಿಯವಾದ ಜೈನ ಧರ್ಮ ಪರಂಪರೆಗಳು ಇಂದಿಗೂ ಪ್ರಸ್ತುತವಾಗಿವೆ. ಅಲ್ಲದೇ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಜೈನ ಧರ್ಮದ ಚಾಪು ಮೂಡಿಸಿದೆ ಎಂದರು.
ಜಾತ್ರಾ ಅಂಗವಾಗಿ ಅರಳಿಕಟ್ಟೆ ಮನೆತನದವರಿಂದ ಉಚಿತ ಅನ್ನಸಂತರ್ಪಣೆ ಹಾಗೂ ಸಾರಂಗಪಾಣಿ ಕುಟುಂಬ ವರ್ಗದಿಂದ ಮಜ್ಜಿಗೆ ವಿತರಣೆ ಕಾರ್ಯ ನಡೆಯಿತು.

ರಥವು ಬನ ಶಂಕರಿದೇವಸ್ಥಾನದ ಮೂಲಕ ಹಾದುಹೋಗಿ ಅಡ್ಡಗೆರೆ ರಸ್ತೆ, ಊರಬಾಗಿಲು ಗಣಪತಿ ಹಾಗೂ ಆಂಜನೇಯ ದೇವಸ್ಥಾನದ ಮೂಲಕ ದೇವಸ್ಥಾನಕ್ಕೆ ತಲುಪಿತು. ದೇವಿಯ ತೇರು ಸಾಗುವ ದಾರಿಯಲ್ಲಿ ಹೆಂಗೆಳೆಯರಿಂದ ಉತ್ಸಾಹ ಭರದಲ್ಲಿ ಮನೆ ಮುಂದೆ ರಂಗೋಲಿ ಹಾಗೂ ತಳಿರು ತೋರಣಗಳಿಂದ ಶೃಂಗರಿಸಲ್ಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.