ADVERTISEMENT

ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 5:15 IST
Last Updated 6 ಜುಲೈ 2013, 5:15 IST

ಭದ್ರಾವತಿ:  ತಾಲ್ಲೂಕಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳನ್ನು ಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡು ಹಲವು ಪ್ರಶ್ನೆಗಳ ಮೂಲಕ ಇಕ್ಕಟ್ಟಿಗೆ ಸಿಲುಕಿಸಿದ ಪ್ರಸಂಗ ಶುಕ್ರವಾರ ತಾ.ಪಂ ಸಭಾಂಗಣದಲ್ಲಿ ನಡೆಯಿತು.

ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ತಡವಾಗಿ ಆರಂಭವಾದ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ವರದಿ ನೀಡುವ ಜತೆಗೆ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಜೆ.ಅಪ್ಪಾಜಿ `ಸರ್ಕಾರ ಕೊಟ್ಟ ಅನುದಾನ ಸಮರ್ಪಕ ಬಳಕೆ ಮಾಡಿಕೊಂಡು ವರದಿ ನೀಡಲು ಸಬೂಬು ಹೇಳುವುದು ಸರಿಯಲ್ಲ' ಎಂದು  ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಜಿ.ಪಂ ಸದಸ್ಯ ಎಸ್.ಕುಮಾರ್ ತಮ್ಮ ವ್ಯಾಪ್ತಿಯ ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ, ಕಳಪೆ ರಸ್ತೆ ಕಾಮಗಾರಿ ವಿಷಯಗಳ ಕುರಿತಂತೆ ಸಭೆಯ ಗಮನ ಸೆಳೆದರು. ಸದಸ್ಯೆ ಉಷಾ ಸತೀಶ್‌ಗೌಡ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಚಾರವನ್ನು ಸಭೆ ಗಮನಕ್ಕೆ ತಂದರು.  ಜಿ.ಪಂ ಉಪಾಧ್ಯಕ್ಷೆ ಹೇಮಪಾವನಿ ಡೆಂಗೆ ನಿಯಂತ್ರಣಕ್ಕೆ ಫಾಗಿಂಗ್ ಮಾಡುವ ಸಲುವಾಗಿ ಪ್ರತಿ ಗ್ರಾ.ಪಂ ವ್ಯಾಪ್ತಿಗೆ ರೂ. 7 ಸಾವಿರ ಹಣ ಬಿಡುಗಡೆ ಮಾಡಲಾಗಿದೆ.

ಇದರ ಪ್ರಗತಿ ಹೇಗೆ ನಡೆದಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿಯನ್ನು ಪ್ರಶ್ನಿಸುವ ಜತೆಗೆ ಆನವೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು.

ಬಿಆರ್‌ಪಿ ಆಸ್ಪತ್ರೆ ಕಾಮಗಾರಿ, ತಾಷ್ಕೆಂಟ್‌ನಗರ, ಮಾವಿನಕೆರೆ ಆಸ್ಪತ್ರೆ ನರ್ಸ್ ನೇಮಕ, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಕೊರತೆ ನೀಗಿಸುವ ಮನವಿ, ಕಲ್ಲಳ್ಳಿ ಶಾಲೆ ದುರಸ್ತಿ, ದೊಣಬಘಟ್ಟ ಕೆರೆ ನೀರಿನ ಶುದ್ಧತೆಗೆ ಆದ್ಯತೆ, ಸರ್ವ ಶಿಕ್ಷಾ ಅಭಿಯಾನ, ಅಕ್ಷರ ದಾಸೋಹ ಕುರಿತಾದ ಹಲವು ಮಹತ್ವದ ವಿಷಯಗಳ ಚರ್ಚೆ ಬಗ್ಗೆಯೂ  ನಡೆಯಿತು. ಸಭೆಯಲ್ಲಿ ತಾ.ಪಂ ಅಧಿಕಾರಿ ಮಲ್ಲೇಶಪ್ಪ, ಅಧ್ಯಕ್ಷೆ ಜಮರುದ್‌ಬಾನು, ಉಪಾಧ್ಯಕ್ಷೆ ಗೌರಮ್ಮ, ಜಿ.ಪಂ ಸದಸ್ಯೆ ಸುಜಾತಾ, ಸರ್ಕಾರದ ನಾಮ ನಿರ್ದೇಶಿತ ಪ್ರತಿನಿಧಿಗಳಾದ ನಾರಾಯಣ, ಬಸವರಾಜು, ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.