ADVERTISEMENT

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ತುಂಗಾನದಿ!

ನದಿ ಪಾತ್ರಗಳಲ್ಲಿ ಎಚ್ಚರಿಕೆ ಫಲಕಗಳ ಕೊರತೆ: ಸೂಕ್ತ ಕ್ರಮಕ್ಕೆ ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 7:01 IST
Last Updated 20 ಡಿಸೆಂಬರ್ 2013, 7:01 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹರಿಯುವ ತುಂಗಾ ನದಿ.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹರಿಯುವ ತುಂಗಾ ನದಿ.   

ತೀರ್ಥಹಳ್ಳಿ: ಇಲ್ಲಿಗೆ ಪ್ರವಾಸಕ್ಕೆ ಬಂದವರು ತುಂಗಾ ನದಿಯ ಸೆಳೆತಕ್ಕೆ ಸಿಲುಕಿ ನೀರು ಪಾಲಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೇಸಿಗೆಯ ಸಂದರ್ಭದಲ್ಲಿ ಬರುವ ಅನೇಕ ಪ್ರವಾಸಿಗರು ತುಂಗಾ ನದಿಯ ಅಪಾಯದ ಮಾಹಿತಿ ತಿಳಿಯದೇ ನೀರಿಗಿಳಿದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಹರಿಯುವ ತುಂಗಾ ನದಿಯಲ್ಲಿ  ಮರಳು ತುಂಬಿದ ರಾಶಿಯ ಸೊಬಗನ್ನು ಕಂಡ ಪ್ರವಾಸಿಗರು ನದಿ ನೀರಿಗೆ
ಇಳಿಯುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇಂಥ ಪ್ರದೇಶಗಳಲ್ಲಿ ಅನುಸರಿಸಬೇಕಾದ ಎಚ್ಚರಿಕೆಗಳ ಬಗ್ಗೆ
ಯಾವ ಮಾಹಿತಿ ತಿಳಿಯದೇ ನದಿಗೆ ಇಳಿಯುವ ಉತ್ಸಾಹಿಗಳು ನೀರಿನ ಸೆಳೆವಿಗೆ ಹಾಗೂ ಸುಳಿಗೆ ಸಿಲುಕಿ ದುರಂತ ಅಂತ್ಯ ಕಾಣುತ್ತಿದ್ದಾರೆ.

ಮಾಳೂರು ಸಮೀಪ ಮಹಿಷಿ, ಮೇಳಿಗೆ ಸಮೀಪ ಸಿಬ್ಬಲುಗುಡ್ಡೆ, ಬಾಳಗಾರು, ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ ಸೇರಿದಂತೆ ಭೀಮನಕಟ್ಟೆ ಮುಂತಾದ ಸ್ಥಳಗಳು ಅತ್ಯಂತ ಮನೋಹರ ಪ್ರದೇಶವಾಗಿದೆ. ಇಂಥ ಸ್ಥಳಗಳಲ್ಲಿ ಅಲ್ಲಿನ ಅಪಾಯವನ್ನು ತಿಳಿಯದೇ ನೀರಿಗಿಳಿದು ಹಲವರು ಜೀವ ಕಳೆದುಕೊಂಡಿದ್ದಾರೆ.

ಕಳೆದ ಭಾನುವಾರ ಶಿವಮೊಗ್ಗದ  ವೈದ್ಯಕೀಯ ಕಾಲೇಜಿನ   ಪ್ರಥಮ ಎಂಬಿಬಿಎಸ್‌ ವಿದ್ಯಾರ್ಥಿ ಕೆ.ಎಂ.ನಂದನ್‌ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಸಿಬ್ಬಲುಗುಡ್ಡೆಯಲ್ಲಿನ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟರು. ಇಂಥ ಘಟನೆಗಳು ಇಲ್ಲಿ ಸಂಭವಿಸುತ್ತಲೇ ಇವೆ ಪ್ರತಿ ವರ್ಷ ನದಿಯಲ್ಲಿ ಮುಳುಗಿ ಮೃತಪಡುವವರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ನದಿ ಪ್ರದೇಶದಲ್ಲಿ ಸೂಚನಾ ಫಲಕ, ಸ್ಥಳೀಯವಾಗಿ ಎಚ್ಚರಿಕೆ ನೀಡುವ ವ್ಯವಸ್ಥೆ ಇಲ್ಲರಿರುವುದು ಮತ್ತಷ್ಟು ಅಪಾಯಕ್ಕೆ ಕಾರಣವಾಗಿದೆ.

ಮಾಳೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಮಹಿಷಿ ಅಶ್ವತ್ಥನಾರಾಯಣ ಸ್ವಾಮಿ ದೇವಸ್ಥಾನದ ಸಮೀಪ ಹರಿಯುವ ತುಂಗಾನದಿಯಲ್ಲಿ ಪ್ರತಿ ವರ್ಷ ಎರಡರಿಂದ ಮೂರು ಮಂದಿ ನೀರಿನಲ್ಲಿ ಮುಳುಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈಜು ಗೊತ್ತಿದ್ದವರೂ ಕೂಡ ಹರಿಯುವ ನದಿಯ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪುತ್ತಾರೆ. ಕಲ್ಲುಪೊಟರೆಯನ್ನು ಒಳಗೊಂಡ ನದಿಯ ಪಾತ್ರ ಬಹಳ ವಿಶಿಷ್ಟವಾಗಿದ್ದು ಅಷ್ಟೇ ಅಪಾಯಕಾರಿ ಕೂಡ.

ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದ ಸಮೀಪ ಹರಿಯುವ ತುಂಗಾನದಿಯಲ್ಲಿಯೂ ಕೂಡ ಇಂಥ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಡಿಸೆಂಬರ್‌, ಜನವರಿಯಲ್ಲಿ ಇಲ್ಲಿ ನಡೆಯುವ ಎಳ್ಳಮಾವಾಸ್ಯೆ ಜಾತ್ರೆ ಸಂದರ್ಭದಲ್ಲಿಯೂ ಸಾಕಷ್ಟು ಅಪಾಯಗಳು ಸಂಭವಿಸಿವೆ. ಇಂಥ ಅವಘಡ ತಪ್ಪಿಸಲು ಸಂಬಂಧಪಟ್ಟ ಇಲಾಖೆ ಸೂಕ್ತ ಭದ್ರತೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.