ADVERTISEMENT

‘ಅಮಿತ್ ಶಾ ಭೇಟಿಯಿಂದ ರೈತರಿಗೆ ನಿರಾಸೆ’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 6:39 IST
Last Updated 29 ಮಾರ್ಚ್ 2018, 6:39 IST
ಶಿರಾಳಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಶಾಸಕ ಮಧು ಬಂಗಾರಪ್ಪ ಮಾತನಾಡಿದರು
ಶಿರಾಳಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಶಾಸಕ ಮಧು ಬಂಗಾರಪ್ಪ ಮಾತನಾಡಿದರು   

ಶಿರಾಳಕೊಪ್ಪ: ‘ಅಮಿತ್ ಶಾ ರೈತರಿಗೆ ಕೈಕೊಟ್ಟು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಕೈ ಹಿಡಿದು ಎತ್ತಿ, ಹೋಗಿದ್ದಾರೆ, ಇದರಿಂದ ಜಿಲ್ಲೆಯ ರೈತ ಸಮುದಾಯಕ್ಕೆ ಏನೂ ಪ್ರಯೋಜನವಾಗಿಲ್ಲ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ಏಪ್ರಿಲ್ 5ರಂದು ಶಿಕಾರಿಪುರದಲ್ಲಿ ಆಯೋಜಿಸಲಾಗಿರುವ ಜೆಡಿಎಸ್ ವಿಕಾಸ ಪರ್ವ ಬಹಿರಂಗ ಸಭೆಯ ಪೂರ್ವಭಾವಿ ಸಮಾಲೋಚನ ಸಭೆ ಉದ್ದೇಶಿಸಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಅವರು ಮಾತನಾಡಿದರು.

ದೇಶದಾದ್ಯಂತ ರೈತರ ಆತ್ಮಹತ್ಯೆ ಆಗಿಲ್ಲ ಎಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದು, ಕರ್ನಾಟಕದಲ್ಲಿ ಮಾತ್ರ 3,515 ರೈತರ ಆತ್ಮಹತ್ಯ ಆಗಿದೆ ಎಂದು ಆಪಾದನೆ ಮಾಡುತ್ತಿದ್ದಾರೆ. ಹಾಗಾದರೆ ಕರ್ನಾಟಕ ಯಾವ ದೇಶದಲ್ಲಿದೆ ಎಂಬುದನ್ನು ಅವರು ಮೊದಲು ಸ್ಪಷ್ಟಪಡಿಸಲಿ ಎಂದರು.

ADVERTISEMENT

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಯೋಗಕ್ಕೆ ಬಾರದ ದಂಡಾವತಿ ಯೋಜನೆಗಾಗಿ
₹ 200 ಕೋಟಿ ಹಣ ಮೀಸಲಿಟ್ಟಿದ್ದರು. ಅದರಲ್ಲಿ ಅರ್ಧದಷ್ಟು ಆಸಕ್ತಿ ತೋರಿಸಿದ್ದರೂ ತಾಲ್ಲೂಕಿನ ಉಡುಗಣಿ, ತಾಳಗುಂದ ಹಾಗೂ ಹೊಸೂರು ಹೋಬಳಿಗಳಿಗೆ ನೀರಾವರಿ ಯೋಜನೆ ಜಾರಿ ಮಾಡಬಹುದಿತ್ತು. ಸಂಸದರಾದ ಮೇಲೆ ಜಿಲ್ಲೆಯ ಎಷ್ಟು ಸಮಸ್ಯೆಗಳಿಗೆ ಸಂಸತ್ತಿನಲ್ಲಿ ಧ್ವನಿಯೆತ್ತಿದ್ದಾರೆ? ಬೇರೆ ಸಂಸದರಿಗಿಂತ ಎಷ್ಟು ಪಟ್ಟು ಅಧಿಕ ಅನುದಾನವನ್ನು ಜಿಲ್ಲೆಗೆ ತಂದಿದ್ದಾರೆ ಎಂದು ಅವರು ತಿಳಿಸಲಿ ಎಂದು ಸವಾಲು ಹಾಕಿದರು.ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಬಳಿಗಾರ್ ಮಾತನಾಡಿ, ‘ಸಾಗರದಿಂದ ಬಂದಿರುವ ಕೆ.ಎಸ್.ಗುರುಮೂರ್ತಿ ಅವರಿಗೆ ತಾಲ್ಲೂಕಿನ ರೈತ ಸಮುದಾಯದ ಮೇಲೆ ಕಿಂಚಿತ್ತಾದರೂ ಗೌರವವಿದ್ದಿದ್ದರೆ ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ತಾಲ್ಲೂಕಿಗೆ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಸಲಹೆ ನೀಡುತ್ತಿದ್ದರು. ಈಗ ತಮ್ಮ ವಿರುದ್ಧ ಸುಮ್ಮನೆ ಭಾಷಣ ಮಾಡು
ತ್ತಿರಲಿಲ್ಲ. ತಾಲ್ಲೂಕಿನ ಜನರು ಒಂದು ಅವಕಾಶ ನೀಡಲಿ; ನೀರಾವರಿ ಕಲ್ಪಿಸಿ ತೋರಿಸುತ್ತೇನೆ’ ಎಂದು ಭರವಸೆ ನೀಡಿದರು.

ಮಂಗಳವಾರ ರಾತ್ರಿ ನಿಧನರಾದ ತಾಲ್ಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಕ್ಬೂಲ್ ಸಾಬ್ ಅವರ ಪತ್ನಿಯ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಭೆಗೂ ಮೊದಲು ಪಡೆದರು.

ಸಭೆಯಲ್ಲಿ ಹಿರೆಕೆರೂರು ಜೆಡಿಎಸ್ ಅಭ್ಯರ್ಥಿ ಸಿದ್ದಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿಳಿಕಿ ನಾಗರಾಜ್ ಗೌಡ, ಟೌನ್ ಅಧ್ಯಕ್ಷ ಬೆಲವಂತನಕೊಪ್ಪ ರಾಘು, ಬ್ಲಾಕ್ ಅಧ್ಯಕ್ಷ ಕೊಟ್ರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ದಯಾನಂದ್ ರಾಯ್ಕರ್, ತೇಜಾನಾಯ್ಕ್, ನೂರ್ ಅಹ್ಮದ್, ಚಂದ್ರಶೇಖರ್, ಬೂದಿಗೌಡ್ರು, ಜಗದೀಶ್ ಇದ್ದರು. ಗಂಗಾಧರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.