ಶಿವಮೊಗ್ಗ: ನಗರದಲ್ಲಿ ರಾರಾಜಿಸುತ್ತಿರುವ ಅಶ್ಲೀಲ ಚಲನಚಿತ್ರ ಪೋಸ್ಟರ್ ತೆರವಿಗೆ ಮುಂದಾಗದ ಪ್ರಜ್ಞಾವಂತರಲ್ಲಿ ಜಾಗೃತಿ ಮೂಡಿಸಲು ಎಂಜಿನಿಯರಿಂಗ್ ಉದ್ಯೋಗಿಗಳ ತಂಡವೊಂದು ಸಜ್ಜಾಗಿದೆ.
‘ಹೈವ್ ಸ್ಪಿರಿಟ್’ (‘ಜೇನುಗೂಡು ಚೇತನ’) ಎಂಬ 22ಉದ್ಯೋಗಿಗಳ ತಂಡ ಈಗಾಗಲೇ ತನ್ನ ಕಾರ್ಯಾಚರಣೆ ಪ್ರಾರಂಭಿಸಿದ್ದು, ನಗರದ ಪ್ರತಿಯೊಂದು ಶಾಲಾ–ಕಾಲೇಜು ಬಳಿಯಿರುವ ಅಶ್ಲೀಲ ಪೋಸ್ಟರ್ ತೆರವು ಮಾಡುವುದಲ್ಲದೇ ಬಣ್ಣ ಬಳಿದು, ಸುಂದರ ಪರಿಸರ ನಿರ್ಮಾಣ ಮಾಡಲು ಮುಂದಾಗಿದೆ.
ಸ್ವಯಂಪ್ರೇರಿತವಾಗಿ ಸಜ್ಜಾಗಿರುವ ತಂಡ ‘ಕ್ಲೀನ್ ದ ಸಿಟಿ’ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಈಗಾಗಲೇ ಸಂಚಾರ ನಡೆಸುತ್ತಿದೆ. ಅಶ್ಲೀಲ ಪೋಸ್ಟರ್ ನಿರ್ಮೂಲನೆ ಹಾಗೂ ನಗರ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಯೋಜನೆಗಳ ರೂಪುರೇಷೆ ತಯಾರು ಮಾಡಿಕೊಂಡಿದೆ.
‘ಪ್ರಥಮ ಹಂತದಲ್ಲಿ ಡಿ.ವಿ.ಎಸ್, ಕಸ್ತೂರಬಾ ಕಾಲೇಜುಗಳು, ನಗರ ಕೇಂದ್ರ ಗ್ರಂಥಾಲಯಗಳ ಕಾಂಪೌಂಡ್ ಹಾಗೂ ಗೋಡೆಗಳ ಮೇಲೆ ಅಂಟಿಸಿರುವ ಅಶ್ಲೀಲ ಪೋಸ್ಟರ್ ತೆರವುಗೊಳಿಸಲಾಗುತ್ತದೆ’ ಎಂದು ‘ಹೈವ್ ಸ್ಪಿರಿಟ್’ ತಂಡದ ಸದಸ್ಯ ಅನಿಲ್ ಬನ್ನಿಕೆರೆ ತಿಳಿಸುತ್ತಾರೆ.
ಇಂತಹ ಪೋಸ್ಟರ್‌ಗಳಿಂದ ಯುವಕರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು 9ಜನ ಯುವತಿಯರು ಸೇರಿದಂತೆ ಒಟ್ಟು 22ಜನ ಎಂಜಿನಿಯರಿಂಗ್ ಉದ್ಯೋಗಿ ಗಳನ್ನೊಳಗೊಂಡ ತಂಡ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ ಎನ್ನುತ್ತಾರೆ ಅವರು.
ಮುಂದಿನ ದಿನಗಳಲ್ಲಿ ಅಶ್ಲೀಲ ಪೋಸ್ಟರ್‌ಗಳನ್ನು ಪ್ರಮುಖವಾಗಿ ಶಾಲಾ–ಕಾಲೇಜು ವಲಯ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹಾಕ ಬಾರದು ಎಂಬ ಆಗ್ರಹ ನಮ್ಮದಾಗಿದೆ ಎಂದು ಹೇಳುತ್ತಾರೆ.
ಕೇವಲ ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತಗೊಳಿಸದೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಂಚಾರ ಮಾಡಿ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸುತ್ತಾರೆ.
ನಗರಪಾಲಿಕೆ ಅಧಿಕಾರಿಗಳು ಸಂಸ್ಥೆಯ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನೋಡಿ, ಕೈಜೋಡಿಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ವಿವಿಧ ವಾರ್ಡ್ ಗಳಿಗೆ ತೆರಳಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಯೋಜನೆ ಕೂಡ ನಮ್ಮ ಮುಂದಿದೆ’ ಎಂದು ಅವರು ಹೇಳುತ್ತಾರೆ.
ಪ್ರಜ್ಞಾವಂತರಲ್ಲಿ ಪರಿಸರ ಕಾಳಜಿ ಮೂಡಿಸಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಆದರೆ, ಅಶ್ಲೀಲ ಚಿತ್ರಗಳನ್ನು ಗಮನಿಸಿದರೂ ಗಮನಿಸದೆ ಇದ್ದಂಗೆ ಪ್ರಜ್ಞಾವಂತರು ಇರುವುದು ಬೇಸರತರಿಸುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.
‘ಹೈವ್ ಸ್ಪಿರಿಟ್’ ಸಂಸ್ಥೆಯಿಂದಲೇ ಸ್ವಚ್ಛತೆ ಕಾಣದ ಕೆಲವು ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಕೂಡ ನೀಡಲಾಗಿದೆ. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಕಸದಬುಟ್ಟಿಗಳನ್ನು ಇಡಲಾಗುವುದು ಎಂದು ಅವರು ಮಾಹಿತಿ ನೀಡುತ್ತಾರೆ.
‘ನಾವು ಯಾವುದೇ ಅನುದಾನ ಅಪೇಕ್ಷಿಸುತ್ತಿಲ್ಲ. ಶಿವಮೊಗ್ಗ ನಗರವನ್ನು ಸುಂದರ ನಗರವನ್ನಾಗಿ ಮಾಡುವ ಪಣತೊಟ್ಟು, ಇದಕ್ಕೆ ಮುಂದಾಗಿದ್ದೇವೆ ಹೊರತು ಹೆಸರು ಸಂಪಾದಿಸುವುದಕ್ಕೆ ಅಲ್ಲ’ ಎಂದು ಅವರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.