ADVERTISEMENT

ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 5:15 IST
Last Updated 21 ಏಪ್ರಿಲ್ 2012, 5:15 IST

ಶಿವಮೊಗ್ಗ: ಊರಿನ ಆರೋಗ್ಯ ಕಾಪಾಡಲು ಶ್ರಮಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯ ಸಂರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಸಲಹೆ ಮಾಡಿದರು.

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನಗರಸಭೆ, ವಿಕಾಸ ಟ್ರಸ್ಟ್‌ನ ಕೇಶವ ಉಚಿತ ಚಿಕಿತ್ಸಾಲಯ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ `ಅಜಿತ್ ಶ್ರೀ ಸೇವಾ ಯೋಜನೆ~ ಅಡಿಯಲ್ಲಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ಬೃಹತ್ ಆರೋಗ್ಯ ಶಿಬಿರವನ್ನು ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪೌರಕಾರ್ಮಿಕರು ನಿರಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದ ಅವರು, ಪೌರ ಕಾರ್ಮಿಕರ ಕಲ್ಯಾಣಕ್ಕೆ ಕೇಂದ್ರ - ರಾಜ್ಯ ಸರ್ಕಾರಗಳು, ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಇವುಗಳ ಸದುಪಯೋಗವನ್ನು ನೌಕರರು ಪಡೆದುಕೊಳ್ಳಬೇಕು ಎಂದರು.

ಪರಿಸರ ಸಂರಕ್ಷಣೆ ಮಾಡಿ, ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ಶ್ರಮಿಸುತ್ತಾರೆ. ಇಡೀ ವ್ಯವಸ್ಥೆಯನ್ನು ಶುದ್ದವಾಗಿಡಲು ಹಗಲಿರುಳು ಶ್ರಮಿಸುತ್ತಾರೆ. ಈ ಮೂಲಕ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಉಪಾಧ್ಯಕ್ಷ ಎಸ್. ರಾಮು, ಆಯುಕ್ತ ಪಿ.ಜಿ. ರಮೇಶ್, ಸದಸ್ಯರಾದ ಶಂಕರ ಗನ್ನಿ, ವಿಜಯಲಕ್ಷ್ಮೀ ಸಿ. ಪಾಟೀಲ್, ಕೆ. ವಿಶ್ವನಾಥ್, ಎಸ್.ಕೆ. ಮರಿಯಪ್ಪ, ಸಂಘಟಕ ಎ. ಮೈಲಾರಿ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.