ಭದ್ರಾವತಿ: ನೀರಿಗಾಗಿ, ಪಡಿತರಕ್ಕಾಗಿ, ಆಧಾರ್, ರೇಷನ್‌ಕಾರ್ಡ್ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯ. ಆದರೆ, ಆಸ್ತಿ ನೋಂದಣಿಗೆ ಬೆಳಗಿನ ಜಾವದಿಂದ ಸರದಿ ಸಾಲಿನಲ್ಲಿ ನಿಲ್ಲುವ ಮಂದಿಯನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ...
ಹೌದು ! ಇಲ್ಲಿನ ಮಿನಿವಿಧಾನಸೌಧ ಹಿಂಭಾಗದಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಪ್ರತಿದಿನ ಸರದಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಂಪ್ಯೂಟರೀಕೃತ ನೋಂದಣಿ ಕಾರ್ಯದಲ್ಲಿ ವಿಳಂಬ, ಸರಿಯಾದ ವ್ಯವಸ್ಥೆ ಇಲ್ಲದ ಹಾಗೂ ಇನ್ನಿತರ ಅವ್ಯವಸ್ಥೆಗಳ ಕಾರಣ ಸದ್ಯಕ್ಕೆ ಆಸ್ತಿ ನೋಂದಣಿ ಮಾಡಿಸಲು ಬೆಳಗಿನ ಜಾವವೇ ಬಂದು ಜಾಗ ಹಿಡಿಯುವ ಸ್ಥಿತಿ ಇಲ್ಲಿ ಅನಿವಾರ್ಯವಾಗಿದೆ.
ಈಚೆಗೆ ಗ್ರಾಮ ಪಂಚಾಯ್ತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿ ಮಂಜೂರಾತಿ ನೋಂದಣಿ ಕಾರ್ಯಕ್ಕೆ ಸರ್ಕಾರ ಅನುಮತಿ ನೀಡಿದ ನಂತರ ದೈನಂದಿನ ಕೆಲಸ ಹೆಚ್ಚಾಗಿ ಈ ಕಚೇರಿಯ ಮುಂದೆ ಈಗ ಜನದಟ್ಟಣೆಯ ಹೆಚ್ಚಿದೆ.
ಸಾಲಲ್ಲಿ ನಿಂತರೂ ಎಷ್ಟೋ ಸಲ ಕಚೇರಿ ಅವಧಿ ಮುಗಿದು, ಗೊಣಗುತ್ತಲೇ ಮಾರನೇ ದಿನಕ್ಕೆ ಕ್ರಮಸಂಖ್ಯೆ ಚೀಟಿ ಪಡೆದು ನೋಂದಣಿ ಮಾಡಿಸಿಕೊಂಡಿರುವವರ ಜನರ ಸಾಕಷ್ಟು ಉದಾಹರಣೆಗಳು ಇಲ್ಲಿ ಸಾಮಾನ್ಯ.
ಕಚೇರಿಯಲ್ಲಿ ಬಳಕೆ ಮಾಡುತ್ತಿರುವ ಹಳೇ ಕಂಪ್ಯೂಟರ್, ಸ್ಕ್ಯಾನಿಂಗ್ ಹಾಗೂ ಇನ್ನಿತರ ಉಪಕರಣದಿಂದ ನೋಂದಣಿ ವಿಳಂಬತೆ ಹಾದಿ ಹಿಡಿದಿದೆ. ಇದನ್ನು ಸರಿ ಮಾಡುವ ನಿಟ್ಟಿನಲ್ಲಿ ಏಜೆನ್ಸಿ ಬದಲಿಸಿದರೂ ಸಹ ಅವರು ಹೊಸ ವ್ಯವಸ್ಥೆ ಕಲ್ಪಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರುತ್ತಾರೆ ಸಾರ್ವಜನಿಕರು.
ನೋಂದಣಿ ಕುರಿತಾಗಿ ಸಂಪೂರ್ಣ ಮಾಹಿತಿ ನೀಡುವ ‘ಕಿಯೋಸ್ಕ್’ ಯಂತ್ರ ಇದ್ದರೂ, ಅದು ಕೆಲಸ ನಿರ್ವಹಿಸದೆ ವಿಫಲವಾಗಿದೆ. ಇಲ್ಲಿಗೆ ಬರುವ ನಾಗರಿಕರಿಗೆ ನೋಂದಣಿ ಶುಲ್ಕ ಮಾಹಿತಿಯ ಯಾವುದೇ ಫಲಕ ಪ್ರದರ್ಶಿಸದಿರುವುದು ಸಹ ಸಾಕಷ್ಟು ಗೊಂದಲ
ಸೃಷ್ಟಿಸಿದೆ.
ಇದೆಲ್ಲದರ ಜತೆಗೆ ಋಣರಾಹಿತ್ಯ ಪ್ರಮಾಣಪತ್ರ ಪಡೆಯಲು ಸಾಕಷ್ಟು ಬೇಡಿಕೆ ಇದ್ದು, ಇದರ ವಿಳಂಬತೆಗೂ ಅಲ್ಲಿನ ಯಂತ್ರೋಪಕರಣ ಬಳಕೆಯಲ್ಲಿನ ದೋಷ ಕಾರಣ ಎಂಬುದು ಸಾರ್ವಜನಿಕರ ದೂರು.
ಮೂಲ ಸೌಕರ್ಯ ಕೊರತೆ
ಅಲ್ಲಿಗೆ ಬರುವ ನಾಗರಿಕರಿಗೆ ಕೂರಲು ಕುರ್ಚಿ, ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವ ಕಾರಣ ಗಂಟೆಗಟ್ಟಲೆ ಹೊರಗಡೆ ಬಿಸಿಲಿನಲ್ಲಿ ಕಾಯುವ ಸ್ಥಿತಿ ಇದೆ.
ಈ ಧೋರಣೆ ಖಂಡಿಸಿ ಈಚೆಗೆ ರೈತಸಂಘದ ಮುಖಂಡರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ, ಇಲ್ಲಿನ ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗದಿರುವುದು ಜನರ ಆಕ್ರೋಶಕ್ಕೆ
ಕಾರಣವಾಗಿದೆ.
ಇದಲ್ಲದೆ, ಶುಲ್ಕಪಟ್ಟಿ ಪ್ರದರ್ಶನ ಇಲ್ಲದಿರುವುದು, ಸ್ಕ್ಯಾನಿಂಗ್ ವಿಷಯವಾಗಿ ತೆಗೆದುಕೊಳ್ಳುವ ದರ ಕುರಿತಾಗಿ ಮಾಹಿತಿ ಫಲಕ ಪ್ರದರ್ಶಿಸದಿರುವುದು ಸಹ ಅಲ್ಲಿಗೆ ಬರುವ ಜನರ ಪಾಲಿಗೆ ಸಾಕಷ್ಟು ತಲೆನೋವು ತರುವ ಸಂಗತಿಯಾಗಿದೆ.
ಒಟ್ಟಿನಲ್ಲಿ, ನೋಂದಣಿ ಮಾಡಿಸಿಕೊಳ್ಳಲು ಸಹ ಜನರು ಕ್ರಮಸಂಖ್ಯೆ ಪಡೆಯುವ ಸ್ಥಿತಿ ಎದುರಾಗಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣ ಎಂಬುದು ಸಾರ್ವಜನಿಕರ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.