ADVERTISEMENT

ಕಮಲ ಅರಳಿಸಿದ ‘ಪೇಜ್ ಪ್ರಮುಖ್’

ಸಾಗರ: ಬಿಜೆಪಿ ತಂತ್ರಗಾರಿಕೆ ಬಗ್ಗೆ ನಿಲ್ಲದ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 6:17 IST
Last Updated 17 ಮೇ 2018, 6:17 IST

ಸಾಗರ : ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವ ಮಾತಿನಂತೆ ಇಲ್ಲಿನ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದು ದಿನ ಕಳೆದರೂ ಸೋಲು ಗೆಲುವಿಗೆ ಕಾರಣವಾದ ಅಂಶಗಳ ಬಗ್ಗೆ ಜನರಲ್ಲಿ ಚರ್ಚೆ ನಡೆಯುತ್ತಲೇ ಇದೆ. ಬಿಜೆಪಿ ನಡೆಸಿರುವ ತಂತ್ರಗಾರಿಕೆಯಲ್ಲಿ  ‘ಪೇಜ್ ಪ್ರಮುಖ್ ’ ಈಗ ಹೆಚ್ಚು ಚರ್ಚೆಯಾಗುತ್ತಿದೆ.

ಏನಿದು ‘ಪೇಜ್ ಪ್ರಮುಖ್’ ?: ಮತದಾರರ ಪಟ್ಟಿಯ ಒಂದು ಪುಟದಲ್ಲಿ ಸಾಮಾನ್ಯವಾಗಿ 30ರಿಂದ 35 ಮತದಾರರಿರುತ್ತಾರೆ. ಈ ಮತದಾರರ ಪೈಕಿ ತಮಗೆ ಹೆಚ್ಚು ವಿಶ್ವಾಸಿಗರಾದ ಒಬ್ಬರನ್ನು ಗುರುತಿಸಿ ಅವರನ್ನು ‘ಪೇಜ್ ಪ್ರಮುಖ್’ ಎಂದು ನೇಮಕ ಮಾಡುವ ತಂತ್ರವನ್ನು ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಬಳಸಿದೆ.

ಹೀಗೆ ನೇಮಕಗೊಂಡ ವ್ಯಕ್ತಿಯ ಕೆಲಸವೇನೆಂದರೆ ಅವರಿಗೆ ವಹಿಸಲಾದ ಮತದಾರರ ಪಟ್ಟಿಯ ಒಂದು ಪುಟದಲ್ಲಿರುವ ಮತದಾರರನ್ನು ಎ, ಬಿ, ಸಿ ಎಂದು ವರ್ಗೀಕರಿಸಬೇಕು. ‘ಎ’ ಎಂದರೆ ಪಕ್ಕಾ ಬಿಜೆಪಿ ಮತದಾರರು. ‘ಬಿ’ ಎಂದರೆ ಯಾವುದೇ ಪಕ್ಷಕ್ಕೆ ನಿಷ್ಠರಾಗದೆ ಇರುವವರು. ಸಿ. ಎಂದರೆ ಪಕ್ಕಾ ಕಾಂಗ್ರೆಸ್ ನ ಮತದಾರರು.

ADVERTISEMENT

ಪೇಜ್ ಪ್ರಮುಖ್ ಮತದಾನಕ್ಕೆ 30 ದಿನಗಳು ಇವೆ ಎನ್ನುವಾಗ ತನಗೆ ವಹಿಸಲಾದ ಮತದಾರರ ಪಟ್ಟಿಯ ಮತದಾರರನ್ನು ದಿನಕ್ಕೆ ಒಮ್ಮೆಯಾದರೂ ಭೇಟಿಯಾಗಿ ಮತ ಯಾಚನೆ ಮಾಡಿ ಪಕ್ಷದ ಪ್ರಮುಖರಿಗೆ ಮಾಹಿತಿ ನೀಡಬೇಕು. ‘ಬಿ’ ಎಂದು ವರ್ಗೀಕರಿಸಿರುವ ಮತದಾರ ಯಾವ ಜಾತಿ, ಧರ್ಮಕ್ಕೆ ಸೇರಿದ್ದಾನೆ, ಯಾವ ಹುದ್ದೆ ಅಥವಾ ಕೆಲಸ ಮಾಡುತ್ತಿದ್ದಾರೆ, ಯಾರಿಂದ ಹೇಳಿಸಿದರೆ ಬಿಜೆಪಿ ಪರವಾಗಿ ಮತ ಚಲಾಯಿಸಬಹುದು ಎನ್ನುವ ಕುರಿತು ಕೂಡ ವರದಿ ನೀಡಬೇಕು.

ಇದರ ಜೊತೆಗೆ ‘ಸಿ’ ಎಂದು ಗುರುತಿಸಿರುವ ಮತದಾರರನ್ನು ಯಾವುದಾದರೂ ರೀತಿಯಲ್ಲಿ ಬಿಜೆಪಿ ಪರವಾಗಿ ತಿರುಗುವಂತೆ ಮಾಡಲು ಸಾಧ್ಯವೇ ಎನ್ನುವ ಬಗ್ಗೆಯೂ ಮಾಹಿತಿ ನೀಡಬೇಕು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲು ಬಿಜೆಪಿಯ ವಾರ್ಡ್, ಪಂಚಾಯಿತಿ, ಹೋಬಳಿ ಮಟ್ಟದ ಶಕ್ತಿ ಕೇಂದ್ರಗಳು ಮುಂದಾಗಬೇಕು.

ಉತ್ತರ ಪ್ರದೇಶದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ತಂತ್ರ ಬಳಸಿ ಬಿಜೆಪಿ ಯಶಸ್ವಿಯಾಗಿತ್ತು ಎನ್ನಲಾಗಿದೆ. ಹೀಗಾಗಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೂ ಬಿಜೆಪಿ ‘ಪೇಜ್ ಪ್ರಮುಖ್ ‘ ಕಾರ್ಯಾಚರಣೆಯನ್ನು ಜಾರಿಗೊಳಿಸಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಮೂಲತಃ ಸಾಗರದವರಾಗಿದ್ದು ಮತದಾರರ ಪಟ್ಟಿಯಲ್ಲಿ ಅವರ ಹೆಸರಿದ್ದು ಈಗ ಬೇರೆ ಬೇರೆ ಊರಿನಲ್ಲಿ ಕೆಲಸ
ಮಾಡುತ್ತಿರುವವರ ಪಟ್ಟಿಯನ್ನು ಕೂಡ ಬಿಜೆಪಿ ಸಿದ್ಧಗೊಳಿಸಿತ್ತು. ಇಂತಹ ಮತದಾರರನ್ನು ಸಂಪರ್ಕಿಸಿ ಮತದಾನದ ದಿನ ಅವರು ತಮ್ಮ ಊರಿಗೆ ಬಂದು ಮತ ಚಲಾಯಿಸುವಂತೆ ಮಾಡುವ ತಂತ್ರವನ್ನು ಕೂಡ ಬಿಜೆಪಿ ಅನುಸರಿಸಿದೆ. ಈ ಕಾರಣಕ್ಕಾಗಿಯೇ ಮತದಾನ ನಡೆದ ರಾತ್ರಿ ಸಾಗರದ ಬಸ್ ನಿಲ್ದಾಣದಲ್ಲಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ಊರುಗಳಿಗೆ ತೆರಳಲು ಜನ ಜಂಗುಳಿಯೇ ನೆರೆದಿತ್ತು. ಬಿಜೆಪಿಯ ಪರವಾಗಿರುವ ಸಾಮಾಜಿಕ ಜಾಲತಾಣದಲ್ಲಿ ವಿಭಾಗದಲ್ಲಿ ‘ಮತದಾನ ಪೂರೈಸಿ ತಮ್ಮ ಕರ್ಮ ಭೂಮಿಗೆ ತೆರಳುತ್ತಿರುವ ಅನಿವಾಸಿ ಸಾಗರ ನಿವಾಸಿಗಳು’ ಎಂಬ ಶೀರ್ಷಿಕೆಯಡಿ ವಿಡಿಯೊ ಹರಿದಾಡುತ್ತಿತ್ತು.

ಮತದಾರರ ಮೊಬೈಲ್‌ಗೆ ಫೋನ್ ಮಾಡಿ ಬಿಜೆಪಿಗೆ ಮತ ಹಾಕಿ ಎಂದು ಕೇಳುವ ಕಾರ್ಯಕ್ರಮವನ್ನೂ ಬಿಜೆಪಿ ರೂಪಿಸಿತ್ತು. ಇದರ ಜೊತೆಗೆ ಸಾಮಾಜಿಕ ಜಾಲತಾಣವನ್ನು ಬಿಜೆಪಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಅವರು ಈ ಹಿಂದೆ ಕೆಲವು ಸಮುದಾಯಗಳ ಬಗ್ಗೆ ಲಘುವಾಗಿ ಮಾತ
ನಾಡಿದ ವಿಡಿಯೊವನ್ನು ಜಾಲತಾಣದಲ್ಲಿ ಹರಿಬಿಡುವ ಮೂಲಕ ನಿರ್ದಿಷ್ಟ ಸಮುದಾಯಗಳಿಗೆ ಕಾಂಗ್ರೆಸ್ ಬಗ್ಗೆ ರೋಷ ಹುಟ್ಟುವಂತೆ ಮಾಡಲಾಗಿತ್ತು.

ಹೀಗೆ ಹೊಸ ಹೊಸ ವಿಧಾನಗಳ ಮೂಲಕ ಕಾರ್ಯತಂತ್ರ ರೂಪಿಸುವಲ್ಲಿ ಬಿಜೆಪಿ ಯಶಸ್ಸು ಕಂಡಿದ್ದೇ ಅದರ ಮತಗಳಿಕೆಯಲ್ಲಿ ಜಿಗಿತ ಕಾಣಲು ಕಾರಣವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮತದಾನದ ದಿನವೇ ಪಟಾಕಿ ಖರೀದಿ

ಸಾಗರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮುಖಂಡರ ವಿಶ್ವಾಸ ಯಾವ ಮಟ್ಟಿಗಿತ್ತು ಎಂದರೆ ಮತದಾನ ಮುಗಿದ ಸಂಜೆಯೇ ವಿಜಯೋತ್ಸವ ಆಚರಿಸಲು ಪಟಾಕಿ ಖರೀದಿಸಲಾಗಿತ್ತು. ಕ್ಷೇತ್ರದಲ್ಲಿ ಒಂದು ಸುತ್ತು ಓಡಾಡಿ ಬಂದ ಹರತಾಳು ಹಾಲಪ್ಪ ಅವರು ಅಂದು ರಾತ್ರಿ 8ರ ವೇಳೆಗೆ ನನ್ನ ಗೆಲುವು ಖಚಿತ ಎಂದು ತಮ್ಮ ಆಪ್ತರಿಗೆ ಹೇಳಿ ಪಟಾಕಿ ಖರೀದಿಸುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.

–ಎಂ.ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.