ADVERTISEMENT

ಕರ್ತವ್ಯಕ್ಕೆ ಬಾರದಿದ್ದರೂ ಕಾರ್ಮಿಕರಿಗೆ ಹಾಜರಾತಿ

ಶಿಕಾರಿಪುರ: ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:59 IST
Last Updated 31 ಡಿಸೆಂಬರ್ 2017, 10:59 IST

ಶಿಕಾರಿಪುರ: ‘ಪೌರಕಾರ್ಮಿಕರು ಕರ್ತವ್ಯಕ್ಕೆ ಬಾರದಿದ್ದರೂ ಅಧಿಕಾರಿಗಳು ಹಾಜರಾತಿ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಸದಸ್ಯ ಮಧುಸೂದನ್‌ ಆರೋಪಿಸಿದರು.‌

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಪುರಸಭೆಯಲ್ಲಿ ಕಾಯಂ ನೌಕರರು ಹಾಗೂ ಗುತ್ತಿಗೆ ಆಧಾರದ ಪೌರಕಾರ್ಮಿಕರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಮುಖ್ಯಾಧಿಕಾರಿ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿ ಆರೋಗ್ಯ ನಿರೀಕ್ಷಕ ರಾಜ್‌ಕುಮಾರ್‌, ‘25 ಕಾಯಂ ಪೌರಕಾರ್ಮಿಕರು ಹಾಗೂ 43 ಜನ ಗುತ್ತಿಗೆ ಆಧಾರದ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕರ್ತವ್ಯಕ್ಕೆ ಹಾಜರಾಗದ ಪೌರಕಾರ್ಮಿಕರಿಗೆ ಹಾಜರಾತಿ ನೀಡುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಸದಸ್ಯೆ ರೂಪಕಲಾ ಎಸ್‌.ಹೆಗಡೆ ಮಾತನಾಡಿ, ‘ಪೌರಕಾರ್ಮಿಕರು ಕರ್ತವ್ಯನಿರ್ವಹಿಸುವಾಗ ಆರೋಗ್ಯದ ಹಿತದೃಷ್ಟಿ
ಯಿಂದ ಆರೋಗ್ಯ ರಕ್ಷಕ ಸಾಮಗ್ರಿಯನ್ನು ಹಾಕಿಕೊಳ್ಳಲು ಮುಖ್ಯಾಧಿಕಾರಿ ಸೂಚಿಸಬೇಕು’ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಜಯಣ್ಣ, ‘ಅವುಗಳನ್ನು ಧರಿಸುವಂತೆ ಹಲವು ಬಾರಿ ಸೂಚಿಸಿದರೂ ಪೌರ ಕಾರ್ಮಿಕರು ಪಾಲಿಸುತ್ತಿಲ್ಲ. ಅವುಗಳನ್ನು ಧರಿಸಿದರೆ ಕೆಲಸ ಮಾಡಲು ಸರಿಯಾಗುವುದಿಲ್ಲ ಎಂಬ ಮಾತು ಹೇಳುತ್ತಾರೆ’ ಎಂದು ಹೇಳಿದರು,

ಕಾಂಗ್ರೆಸ್‌ ಸದಸ್ಯ ಪಾರಿವಾಳ ಶಿವರಾಮ್‌ ಮಾತನಾಡಿ, ‘ಸೊಪ್ಪಿನಕೇರಿ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಗೋಡೆಯನ್ನು ಎತ್ತರ ಮಟ್ಟಕ್ಕೆ ಏರಿಸಲು ನಾನು ಲಿಖಿತ ಮನವಿ ನೀಡಿದ್ದೇನೆ. ಆದರೆ, ಸಭೆಯ ಅಜೆಂಡಾದಲ್ಲಿ ನಾನು ಮಾಡಿದ ಮನವಿ ಮಾಡಿದ್ದೇನೆ ಎಂದು ಹೆಸರು ಪ್ರಸ್ತಾಪ ಮಾಡಿಲ್ಲ. ಬಿಜೆಪಿ ಸದಸ್ಯರು ಅಭಿವೃದ್ಧಿ ಬಗ್ಗೆ ಮನವಿ ಮಾಡಿದರೆ ಮಾತ್ರ ಅವರ ಹೆಸರು ಸೇರಿಸುತ್ತಿದ್ದಾರೆ. ಅಧಿಕಾರಿಗಳು ಪಕ್ಷಭೇದ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಮನಿರ್ದೇಶಿತ ಸದಸ್ಯ ಜೈಸು ಸುರೇಶ್‌ಕುಮಾರ್‌ ಮಾತನಾಡಿ, ‘ಪಟ್ಟಣದ ರಾಜಶೇಖರ ಚಿತ್ರಮಂದಿರ ಹಿಂಭಾಗವಿರುವ ಪುರಸಭೆಯ ಅಸೆಸ್‌ಮೆಂಟ್‌ 219/219/210 ಸ್ವತ್ತನ್ನು ಜಿಲ್ಲಾಧಿಕಾರಿ ಅನುಮೋದನೆ ಪಡೆಯದೇ ಹಾಗೂ ಹಣವನ್ನು ಪಾವತಿಸಿಕೊಳ್ಳದೇ ಪರಭಾರೆ ಮಾಡಿದನ್ನು ರದ್ದುಗೊಳಿಸಿಲಾಗಿದೆಯೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ನಿರೀಕ್ಷಕ ರಾಜ್‌ಕುಮಾರ್‌, ‘ಪೌರಡಳಿತ ಇಲಾಖೆ ಈ ಬಗ್ಗೆ ಆದೇಶ ನೀಡಿದ್ದು, ಪರಭಾರೆ ಮಾಡಿರುವುದನ್ನು ರದ್ದು
ಮಾಡುವ ಪ್ರಕ್ರಿಯೆ ಕೂಡ ಜಾರಿಯಲ್ಲಿದೆ.ಇದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನಾವು ಉನ್ನತ ಅಧಿಕಾರಿಗಳಿಗೆ ನೀಡಿದ್ದೇವೆ’ ಎಂದರು.

ಸಭೆಯಲ್ಲಿ ದೈನಂದಿನ ಮಾರುಕಟ್ಟೆ ಸ್ಥಳ ನಿಗದಿಪಡಿಸುವ ಬಗ್ಗೆ, ಆರೋಗ್ಯ ವಿಭಾಗಕ್ಕೆ ಕ್ರಿಮಿನಾಶಕ ಹಾಗೂ ಸಾಧನ ಸಲಕರಣೆಗಳನ್ನು ಪೂರೈಸಿಕೊಳ್ಳಲು ಟೆಂಡರ್‌ ಕರೆಯುವ ವಿಷಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದರು. ಪುರಸಭೆ ಅಧ್ಯಕ್ಷೆ ರತ್ನಮ್ಮ ಸೂರ್ಯಕಾಂತಪ್ಪ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಉಪಾಧ್ಯಕ್ಷೆ ಶಬಾನಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಗೌಡ, ಸದಸ್ಯರಾದ ಗೋಣಿ ಮಾಲತೇಶ್‌, ಕೆ.ಜಿ.ವಸಂತಗೌಡ, ಚಾರಗಲ್ಲಿ ಪರಶುರಾಮ್‌, ಸೈಯದ್‌ಪೀರ್‌, ಎಂ.ಎಚ್‌.ರವೀಂದ್ರ, ಗೌರಮ್ಮ ಪಿ.ರಾಮಯ್ಯ, ಜಬೀನಾ ರಹಮತ್‌ವುಲ್ಲಾ, ಬಿ.ಯಲ್ಲಪ್ಪ, ಪದ್ಮಾ ಗಜೇಂದ್ರ, ಪಾರ್ವತಮ್ಮ, ಬಡಗಿ ಫಾಲಾಕ್ಷ, ತಟ್ಟಿಹಳ್ಳಿ ಸಂಗಮೇಶ್, ಫೈರೋಜಾಬಾನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.