ADVERTISEMENT

ಕಳೆಗುಂದಿದ ಜೋಗ ಜಲಪಾತ, ಪ್ರವಾಸಿಗರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 7:35 IST
Last Updated 16 ಏಪ್ರಿಲ್ 2012, 7:35 IST

ಕಾರ್ಗಲ್: ಪ್ರಕೃತಿ ಸೌಂದರ್ಯದ ಕಣಜ ಎಂದು ಗುರುತಿಸಿಕೊಂಡು ಪ್ರಪಂಚದಾದ್ಯಂತ ಸೌಂದರ್ಯ ಉಪಾಸಕರನ್ನು ಸೆಳೆಯುತ್ತಿದ್ದ ಜೋಗ ಜಲಪಾತ ಇತ್ತೀಚೆಗಿನ ದಿನಗಳಲ್ಲಿ ಸದ್ದಡಗಿ ನಿಂತಿದೆ. ರಾಜನ ಗಾಂಭಿರ್ಯ, ರಾಣಿಯ ಸೌಂದರ್ಯ, ರೋರರ್‌ನ ಅರ್ಭಟ, ರಾಕೆಟ್‌ನ ಶರವೇಗ ಮಾಯವಾಗಿದೆ.

ರಸಿಕ ಪ್ರವಾಸಿಗರಿಗೆ ರಸದೌತಣ ನೀಡಿ ರಮಿಸುತ್ತಿದ್ದ ಜೋಗ ಜಲಪಾತ ಮಳೆಯ ಅಭಾವ, ನೀರಿನ ಕೊರತೆಯಿಂದ ಇಂದು ಬಳಲುತ್ತಿದೆ. ಪ್ರವಾಸಿಗರ ಮನ ನಡುಗಿಸುವ ಭೀಕರ ರೂಪದ ಕಡು ಕಂದು ಬಣ್ಣದ ಬಂಡೆಗಳು ಮಾತ್ರ ಕಂಡು ಬರುತ್ತಿದೆ.

ಮಕ್ಕಳ ಪರೀಕ್ಷೆಗಳನ್ನು ಮುಗಿಸಿ ಶಾಲಾ ರಜಾದಿನದ ಆರಂಭದ ದಿನಗಳಾದ ಈ ಭಾನುವಾರದಂದು ಸಾವಿರಾರು ಸಂಖ್ಯೆಯ ಪ್ರವಾಸಿಗರು ಜೋಗಕ್ಕೆ ಆಗಮಿಸಿದ್ದರು. ರಸಿಕ ಪ್ರವಾಸಿಗರನ್ನು ಜೋಗ ಜಲಪಾತ ಭಾನುವಾರದಂದು ಭಾರೀ ನಿರಾಸೆಯ ಮಡುವಿಗೆ ಕೊಂಡೊಯ್ದಿತ್ತು.

ನೀರಿನ ಕೊರತೆಯಿಂದ ಬಂಡೆಕಲ್ಲುಗಳು ಬಿಸಿಲಿನ ತಾಪದಿಂದ ಕಾವೇರಿಸಿಕೊಂಡಿದ್ದು, ಬಂಡೆಯ ಪೊಟರೆಗಳಲ್ಲಿ ಆಶ್ರಯಿಸಿದ್ದ ಸಾವಿರಾರು ಪಾರಿವಾಳಗಳು, ಪಕ್ಷಿ ಸಂಕುಲಗಳು ವಲಸೆ ಹೋಗುತ್ತಲಿವೆ. ಹರಿದಾಡುವ ಅಪರೂಪದ ವನ್ಯ ಜೀವಿಗಳು ಇಂದು ಇಲ್ಲಿ ಕಾಣೆಯಾಗಿದೆ.

ಶನಿವಾರ ಮತ್ತು ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಜಲಪಾತಕ್ಕೆ 200 ಕ್ಯೂಸೆಕ್ ನೀರು ಹರಿಯಬಿಡಬೇಕು ಎಂಬ ಸರ್ಕಾರದ ಆದೇಶ ಕಾಗದದ ಹಾಳೆಗಳಲ್ಲಿ ಉಳಿದು ಹೋಗಿದೆ. ಜಲಾಶಯದಲ್ಲಿ ನೀರಿನ ಶೇಖರಣೆ ತಳ ಸೇರಿದೆ. ಅಳಿದುಳಿದ ನೀರನ್ನು ವಿದ್ಯುತ್ ಉತ್ಪಾದನೆಗೆ ಮೀಸಲಾಗಿರಿಸಿದೆ.
ಮಳೆಗಾಲಕ್ಕೆ ಇನ್ನೂ 2 ತಿಂಗಳು ಕಾಯಬೇಕು. ಮಳೆ ಸಕಾಲಕ್ಕೆ ಬರುತ್ತದೆ ಎಂಬ ನಂಬಿಕೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.