ADVERTISEMENT

ಕಾಡಾನೆ ಸ್ಥಳಾಂರಕ್ಕೆ ಆಗ್ರಹಿಸಿ ಪಾದಯಾತ್ರೆ 27ಕ್ಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 9:08 IST
Last Updated 25 ಅಕ್ಟೋಬರ್ 2017, 9:08 IST

ತೀರ್ಥಹಳ್ಳಿ: ಆಗುಂಬೆ ಭಾಗದಲ್ಲಿ ಜನರಿಗೆ ಕಿರುಕುಳ ನೀಡುತ್ತಿರುವ ಕಾಡಾನೆ ಸೆರೆಹಿಡಿದು ಸ್ಥಳಾಂತರಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ಆಗುಂಬೆ ಭಾಗದ ಜನರು ಜೀವಭಯದಲ್ಲಿ ಕಾಲ ನೂಕುವಂತಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆದ ಬೆಳೆಯನ್ನು ಸಂರಕ್ಷಿಸಿಕೊಳ್ಳಲಾಗದೇ ರೈತರು ತೊಂದರೆಗೆ ಸಿಲುಕಿದ್ದಾರೆ. ಕಾಡಾನೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಅ. 27ರಂದು ಆಗುಂಬೆಯಿಂದ ಮೇಗರವಳ್ಳಿಯಲ್ಲಿರುವ ಅರಣ್ಯ ಇಲಾಖೆ ಕಚೇರಿವರೆಗೆ ಬಿಜೆಪಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಡಾನೆ ಸ್ಥಳಾಂತರಿಸಲು ಆಗ್ರಹಿಸಿ ಆಡಳಿತ ಪಕ್ಷದ ಶಾಸಕರು ಆಗುಂಬೆಯಲ್ಲಿ ಧರಣಿ ನಡೆಸಿರುವುದು ಅವರ ಅಸಹಾಯಕತೆ ತೋರಿಸುತ್ತದೆ. ಶಾಸಕ ಕಿಮ್ಮನೆ ತಮ್ಮದೇ ಸರ್ಕಾರದ ಜತೆ ಮಾತುಕತೆ ನಡೆಸಿ, ಆನೆ ಸೆರೆಹಿಡಿಸುವಲ್ಲಿ ವಿಫಲರಾಗಿದ್ದಾರೆ. ಸಮಸ್ಯೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

‘ಈ ಭಾಗದಲ್ಲಿ ಬೆಳೆದ ಬೆಳೆ ಕಾಡುಕೋಣಗಳು, ಕಾಡಾನೆ ಹಾವಳಿ ಯಿಂದ ನಾಶವಾಗುತ್ತಿದೆ. ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಸಾಕಾಗುತ್ತಿಲ್ಲ. ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ಸಿಗುತ್ತಿಲ್ಲ. ಕಾಡಿನ ನಡುವೆ ವಾಸವಿರುವ ಜನರು ಭಯದಲ್ಲಿ ಕಾಲ ಕಳೆಯುವಂತಾಗಿದೆ.

ಮಲ್ಲಂದೂರಿನಲ್ಲಿ ಕಾಡಾನೆ ದಾಳಿ ಯಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಮನುಷ್ಯರ ಜೀವಕ್ಕಿಂತ ಕಾಡು ಪ್ರಾಣಿಗಳಿಗೆ ಹೆಚ್ಚು ಮಹತ್ವ ನೀಡುತ್ತಿದೆ. ಪರಿಸರ ಉಳಿಸುವ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಆದರೆ, ಇಲ್ಲಿನ ಜನರ ಬದುಕು ಕೂಡ ಅಷ್ಟೇ ಮುಖ್ಯ ಎಂಬುದನ್ನು ಅರಣ್ಯ ಇಲಾಖೆ, ಸರ್ಕಾರ ಮನಗಾಣಬೇಕು’ ಎಂದು ಆಗ್ರಹಿಸಿದರು.

ಕಾಡು ಪ್ರಾಣಿಗಳ ಜತೆಗೆ ಈ ಭಾಗದಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿವೆ. ಎಲ್ಲಿಂದಲೋ ತಂದು ಆಗುಂಬೆ ಕಾಡಿಗೆ ಮಂಗಗಳನ್ನು ಬಿಡಲಾಗುತ್ತಿದೆ. ಕೃಷಿ ಮಾಡಲು ಈ ಭಾಗದ ಜನರಿಗೆ ಕಷ್ಟವಾಗುತ್ತಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸಬೇಕಾದ ಸಂದರ್ಭ ಎದುರಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು. ಆನೆ ಸ್ಥಳಾಂತರಕ್ಕೆ ಸರ್ಕಾರ ಆದೇಶ ನೀಡಿ, ವರ್ಷ ಕಳೆದರೂ ಅರಣ್ಯ ಇಲಾಖೆ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನಶೆಟ್ಟಿ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್‌, ಮುಖಂಡ ನಾಗರಾಜ ಶೆಟ್ಟಿ,
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಯಶೋದಾ ಮಂಜುನಾಥ್‌, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಸದಸ್ಯ ಪ್ರಶಾಂತ್‌ ಕುಕ್ಕೆ, ಗೀತಾ ಶೆಟ್ಟಿ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ರೇವತಿ ಅನಂತಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.