ADVERTISEMENT

ಕುವೆಂಪು ವಿವಿ ಭ್ರಷ್ಟಾಚಾರದ ಗೂಡು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 5:32 IST
Last Updated 29 ನವೆಂಬರ್ 2017, 5:32 IST
ಕುವೆಂಪು ವಿಶ್ವವಿದ್ಯಾಲಯ
ಕುವೆಂಪು ವಿಶ್ವವಿದ್ಯಾಲಯ   

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದಲ್ಲಿ ವ್ಯಾಪಕ ಭ್ರಷ್ಟಾಚಾರ, ಅಕ್ರಮ ಮತ್ತು ವಂಚನೆ ನಡೆಯುತ್ತಿದೆ. ಪರೀಕ್ಷೆ ತೆಗೆದುಕೊಂಡ ಎಲ್ಲರೂ ತೇರ್ಗಡೆಯಾಗಲು ಹೇಗೆ ಸಾಧ್ಯ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಕೆ.ಸಿ. ನಟರಾಜ ಭಾಗವತ್ ಪ್ರಶ್ನಿಸಿದರು.

ನಿತ್ಯವೂ ಕಾಲೇಜಿಗೆ ತೆರಳಿ ಪದವಿ, ಸ್ನಾತಕೋತ್ತರ ಪದವಿ ಪಡೆಯುವ ಹಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಆದರೆ, ಕುವೆಂಪು ವಿಶ್ವ ವಿದ್ಯಾಲಯದ ದೂರ ಶಿಕ್ಷಣ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡ ಎಲ್ಲ ವಿದ್ಯಾರ್ಥಿಗಳೂ ಅಧಿಕ ಅಂಕ ಪಡೆದು ತೇರ್ಗಡೆಯಾಗುತ್ತಾರೆ. ಇಂತಹ ಕರಾಮತ್ತು ದೇಶದ ಯಾವ ವಿಶ್ವ ವಿದ್ಯಾಲಯಗಳಲ್ಲೂ ನಡೆಯುತ್ತಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿದರು.

ಭ್ರಷ್ಟಾಚಾರದ ಗೂಡು: ಕುವೆಂಪು ವಿಶ್ವವಿದ್ಯಾನಿಲಯ ಅಕ್ರಮ, ಭ್ರಷ್ಟಾಚಾರ ಮತ್ತು ವಂಚನೆಗಳ ಗೂಡಾಗಿದೆ. ಪರೀಕ್ಷಾ ವಿಭಾಗದಲ್ಲಿ ಅಕ್ರಮಗಳು ತಾಂಡವವಾಡುತ್ತಿವೆ. ಕಂಪ್ಯೂಟರ್ ಖರೀದಿ, ಕಟ್ಟಡ ನಿರ್ಮಾಣ, ತುಂಡು ಗುತ್ತಿಗೆಯಲ್ಲೂ ಅಕ್ರಮ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಈಗಾಗಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ADVERTISEMENT

ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿನ ಉನ್ನತ ಶಿಕ್ಷಣ ಗಮನದಲ್ಲಿಟ್ಟುಕೊಂಡು ಕುವೆಂಪು ವಿವಿ ಆರಂಭಿಸಲಾಯಿತು. ಈ ಭಾಗದ ಉನ್ನತ ಶಿಕ್ಷಣ ಮತ್ತು ಸಂಶೋಧನೆಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂಬ ಮಹತ್ವಾಕಾಂಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಮೂರು ದಶಕವಾದರೂ ವಿವಿಯಲ್ಲಿ ವಂಚನೆಗಳು ನಡೆಯುತ್ತಲೇ ಇವೆ ಎಂದು ಕಳವಳ ವ್ಯಕ್ತಪಡಿಸಿದರು.

ನಡೆಯದ ಸಂಶೋಧನೆಗೆ ಸುಳ್ಳು ದಾಖಲೆ ಸೃಷ್ಟಿಸಿ ಅಮೆರಿಕದಿಂದ ಹಣ ಪಡೆಯಲಾಗಿದೆ. ವಿ.ವಿಯ ಶಿಕ್ಷಣ ವ್ಯವಸ್ಥೆ ಸರಿಪಡಿಸಿ, ಪೂರಕ ವಾತಾವರಣ ನಿರ್ಮಿಸದಿದ್ದರೆ ಮತ್ತಷ್ಟು ಅಕ್ರಮ ನಡೆಯುವ ಸಾಧ್ಯತೆ ಇದೆ. ಹಾಗಾಗಿ, ಎಲ್ಲಾ ಅಕ್ರಮ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಡಿ. 2ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಭಾಗವಹಿಸುವ ಕೇಂದ್ರ ಸಚಿವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು.

ಅಧಿಕಾರಿಗಳ ನೇಮಕ್ಕೆ ಆಗ್ರಹ: ಕುಲಸಚಿವ ಸ್ಥಾನಕ್ಕೆ ಐಎಎಸ್ ಅಥವಾ ಸಮಾನ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಬೇಕು. ಪರೀಕ್ಷಾಂಗ ಕುಲಸಚಿವರು, ಹಣಕಾಸು ಅಧಿಕಾರಿಗಳ ಸ್ಥಾನಕ್ಕೆ ಕೆಎಎಸ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿ ನೇಮಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಚಿನ್ ರಾಯ್ಕರ್, ಅಭಿಷೇಕ್ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.