ADVERTISEMENT

ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ನಾಳೆ ಆರಂಭ

ಆಯ್ದ ತಾಲ್ಲೂಕುಗಳಲ್ಲಿ ಪರೀಕ್ಷಾ ಕೇಂದ್ರಗಳು, 51,800 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 5:14 IST
Last Updated 3 ಜೂನ್ 2017, 5:14 IST
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಪೂರ್ವಭಾವಿ ಸಭೆ ನಡೆಯಿತು
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಪೂರ್ವಭಾವಿ ಸಭೆ ನಡೆಯಿತು   

ಶಿವಮೊಗ್ಗ: ಕರ್ನಾಟಕ ಲೋಕಸೇವಾ ಆಯೋಗ ಜಿಲ್ಲೆಯ ಆಯ್ದ ತಾಲ್ಲೂಕುಗಳ ಪರೀಕ್ಷಾ ಕೇಂದ್ರಗಳಲ್ಲಿ ‘ಸಿ ಗ್ರೂಪ್‌’ನ ತಾಂತ್ರಿಕೇತರ ಹುದ್ದೆಗಳಿಗೆ ಜೂನ್ 4, 10 ಮತ್ತು 11ರಂದು ಸ್ಪರ್ಧಾತ್ಮಕ ಪರೀಕ್ಷೆ  ನಡೆಸುತ್ತಿದೆ.  ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಮಾಹಿತಿ ನೀಡಿದರು.

ಪರೀಕ್ಷೆಗೆ ನಿಯೋಜಿತರಾದ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಕೇಂದ್ರದ ಮೇಲ್ವಿಚಾರಕರು ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಶುದ್ಧ ಗಾಳಿ, ಬೆಳಕು, ಕುಡಿಯುವ ನೀರು, ಶೌಚಾಲಯದಂತ  ಮೂಲಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ಪರೀಕ್ಷೆಗಳಲ್ಲಿ ಯಾವುದೇ ಅವ್ಯವಹಾರ, ಅಕ್ರಮ ನಡೆಯದಂತೆ ಹಾಗೂ  ಶಾಂತಿ ಸುವ್ಯವಸ್ಥೆಗೆ ಧಕ್ಕೆ ಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆಗಳನ್ನು ಯಾವುದೇ ಅಡಚಣೆ ಇಲ್ಲದೇ ನಡೆಸಲು ಮಾರ್ಗಾಧಿಕಾರಿ ಹಾಗೂ ವೀಕ್ಷಕರನ್ನು ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾರ್ಥಿ ಗುರುತಿನ ಚೀಟಿ ಹೊಂದಿರಬೇಕು ಎಂದು ಮಾಹಿತಿ ನೀಡಿದರು.

ಮೊಬೈಲ್‌, ಸ್ಮಾರ್ಟ್‌ವಾಚ್ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್, ಕ್ಯಾಲ್‌ಕ್ಯೂಲೇಟರ್ ಮತ್ತು ಸ್ಮಾರ್ಟ್‌ ವಾಚ್ ಸೇರಿದಂತೆ ಎಲೆಕ್ಟ್ರಾನಿಕ್ ಉಪ ಕರಣ ನಿಷೇಧಿಸಲಾಗಿದೆ. ಪರೀಕ್ಷೆ ಆರಂಭಕ್ಕೆ 15 ನಿಮಿಷಗಳ ಮುನ್ನವೇ ಪರೀಕ್ಷಾರ್ಥಿಗಳು ಬರಬೇಕು. ನಂತರ ಬರುವ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದರು.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್‌ ಒಳಗೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪರೀಕ್ಷಾರ್ಥಿ ಗಳನ್ನು ಹೊರತುಪಡಿಸಿ ಅನ್ಯರಿಗೆ ಪ್ರವೇಶವಿಲ್ಲ. ಪರೀಕ್ಷೆ ನಡೆಯುವ ದಿನಗಳಲ್ಲಿ  ಬೆಳಿಗ್ಗೆ 7.30ರಿಂದ ಸಂಜೆ 5.30ರವರೆಗೆ ನಿಷೇಧಾಜ್ಞೆ ಜಾರಿಗೊಳಿಸ ಲಾಗಿದೆ. ಪರೀಕ್ಷಾ ಕೇಂದ್ರದ ಸಮೀಪ ಟೈಪಿಂಗ್, ಝೆರಾಕ್ಸ್, ಫ್ಯಾಕ್ಸ್ ಅಂಗಡಿ ತೆರೆಯುವುದನ್ನು ನಿಷೇಧಿಸಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್, ಉಪ ವಿಭಾಗಾಧಿಕಾರಿ ಎಚ್‌.ಕೆ.ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್. ಮಚಾದೊ, ಕಚೇರಿ ಸಹಾಯಕಿ ನಫೀಜಾ, ಲೋಕಸೇವಾ ಆಯೋಗದ ಕಚೇರಿ ಸಹಾಯಕ ಇಲಿಯಾಸ್ ಉಪಸ್ಥಿತರಿದ್ದರು.

**

ಪರೀಕ್ಷೆಗೆ 51,800 ವಿದ್ಯಾರ್ಥಿಗಳು

ಜೂನ್ 4ರಂದು ಶಿವಮೊಗ್ಗದಲ್ಲಿ 53 ಹಾಗೂ ಭದ್ರಾವತಿ 6 ಕೇಂದ್ರ ಸೇರಿದಂತೆ ಒಟ್ಟು 59 ಕೇಂದ್ರಗಳಲ್ಲಿ 18 ಸಾವಿರ ಅಭ್ಯರ್ಥಿಗಳು ಜೂನ್ 10 ರಂದು ಶಿವಮೊಗ್ಗದ 3 ಪರೀಕ್ಷಾ ಕೇಂದ್ರಗಳಲ್ಲಿ 1,800 ಅಭ್ಯರ್ಥಿಗಳು ಹಾಗೂ ಜೂನ್ 11ರಂದು 89 ಪರೀಕ್ಷಾ ಕೇಂದ್ರಗಳಲ್ಲಿ 32 ಸಾವಿರ ಅಭ್ಯರ್ಥಿಗಳು ಪರೀಕ್ಷೆ  ಬರೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.