ADVERTISEMENT

‘ಕೋಮುವಾದಿ ರಾಜಕಾರಣಿಗಳು ದೇಶದ್ರೋಹಿಗಳು’

​ಪ್ರಜಾವಾಣಿ ವಾರ್ತೆ
Published 7 ಮೇ 2018, 13:43 IST
Last Updated 7 ಮೇ 2018, 13:43 IST

ಸಾಗರ: ‘ಹಿಂದೂ ಮತ್ತು ಮುಸ್ಲಿಮರು  ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ. ರಾಜಕೀಯ ಲಾಭಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಮೂಲಕ ಕೋಮುವಾದದ ರಾಜಕಾರಣ ಮಾಡುವವರು ನಿಜವಾದ ದೇಶದ್ರೋಹಿಗಳು’ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಸ್ವರಾಜ್ ಇಂಡಿಯಾ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಮತದಾರರಿಗೆ ವಿತರಿಸಿ ಅವರು ಮಾತನಾಡಿದರು.

‘ಕರ್ನಾಟಕದ ಕರಾವಳಿಯಲ್ಲಿ ಬಿಜೆಪಿ ಕೋಮುದ್ವೇಷದ ರಾಜಕಾರಣ ಮಾಡುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರ ಚುನಾವಣೆ ಹೊತ್ತಿನಲ್ಲಿ ವೀರಶೈವ-ಲಿಂಗಾಯತ ವಿಷಯವನ್ನು ಮುನ್ನೆಲೆಗೆ ತರುವ ಮೂಲಕ ಜಾತಿ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಶಿವಮೊಗ್ಗಕ್ಕೆ ನರೇಂದ್ರ ಮೋದಿ ಅವರು ಬಂದಾಗ ಮರಳು ಮಾಫಿಯಾಕ್ಕೆ ಕಾಂಗ್ರೆಸ್ ಬೆಂಬಲ ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಅವರು ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಕಬ್ಬಿಣದ ಅದಿರನ್ನು ಲೂಟಿ ಮಾಡಿರುವ ಬಗ್ಗೆ ಯಾಕೆ ಮೌನ ವಹಿಸುತ್ತಾರೆ’ ಎಂದು ಪ್ರಶ್ನಿಸಿದರು.

‘ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ಗೆ ಬಂಗಾರದ ಪದಕ ಕೊಡಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಇದಕ್ಕೆ ಅರ್ಹವಾಗಿದೆ. ಆದರೆ ಕರ್ನಾಟಕದಲ್ಲಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಬಿಜೆಪಿಗೆ ಬಂಗಾರದ ಪದಕ ನೀಡಬೇಕು’ ಎಂದು ವ್ಯಂಗ್ಯವಾಡಿದರು.

‘ಸಾಮಾನ್ಯ ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿಗೆ ಅವಕಾಶ ನೀಡುವ ಮೂಲಕ ಸಾಗರದಲ್ಲಿ ಹೊಸ ಇತಿಹಾಸ ನಿರ್ಮಾಣಕ್ಕೆ ಸ್ವರಾಜ್ ಇಂಡಿಯಾ ಮುಂದಾಗಿದೆ. ಪಕ್ಷದ ಆಂದೋಲನದ ಬೀಜ ಮಲೆನಾಡಿನ ಈ ಪ್ರದೇಶದಿಂದಲೆ ಮೊಳಕೆಯೊಡೆಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಾಗರ ಕ್ಷೇತ್ರದ ಸ್ವರಾಜ್ ಇಂಡಿಯಾದ ಅಭ್ಯರ್ಥಿ ಪರಮೇಶ್ವರ ದೂಗೂರು, ಪಕ್ಷದ ಪ್ರಮುಖರಾದ ಅಂಜದ್ ಪಾಷಾ, ಎನ್.ಡಿ.ವಸಂತ ಕುಮಾರ್, ಶಿವಾನಂದ ಕುಗ್ವೆ, ಕೆ.ಪಿ.ಶ್ರೀಪಾಲ್, ವಾಮದೇವ ಗೌಡ, ವೃಂದಾ ಹೆಗಡೆ, ಭಾಗ್ಯ ಪಿ.ಗೌಡ, ಎಚ್.ಬಿ.ರಾಘವೇಂದ್ರ, ಲಿಂಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.