ADVERTISEMENT

ಕೌಟುಂಬಿಕ ದೌರ್ಜನ್ಯಗಳಿಗೆ ಸಕಾಲ ನ್ಯಾಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 9:00 IST
Last Updated 20 ಅಕ್ಟೋಬರ್ 2012, 9:00 IST

ಶಿವಮೊಗ್ಗ: ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಸಕ್ಷಮ ಅಧಿಕಾರಿಗಳು ಸಕಾಲದಲ್ಲಿ ನ್ಯಾಯ ಒದಗಿಸಿಕೊಡಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದಲ್ಲದೇ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಸ್. ಮಹಾಲಕ್ಷ್ಮೀ ನೇರಳೆ ಎಚ್ಚರಿಕೆ ನೀಡಿದರು.

ನಗರದ ರಾಜೇಂದ್ರ ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮದ ಬಗ್ಗೆ ಸಂರಕ್ಷಣಾಧಿಕಾರಿಗಳು, ಆರೋಗ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಯ ಜನಪ್ರತಿನಿಧಿಗಳಿಗಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಸಂರಕ್ಷಣೆಗಾಗಿ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಮಹಿಳೆಗೆ ಸುರಕ್ಷಿತ ವಾತಾವರಣ ಮತ್ತು ಹಕ್ಕುಗಳು ದೊರೆಯದಿರುವುದು ಬೇಸರದ ಸಂಗತಿ ಎಂದರು.

ಮನೆಯಲ್ಲಿ ಕ್ಷುಲ್ಲಕ ಕಾರಣಗಳಿಂದಾಗಿ ವಿವಿಧ ರೀತಿಯ ಹಿಂಸೆ ಅನುಭವಿಸುತ್ತಿರುವ ಮಹಿಳೆಗೆ ಶೀಘ್ರ ಸಹಾಯ, ಬೆಂಬಲ ಹಾಗೂ ಪರಿಹಾರ ದೊರಕಿಸಿಕೊಡುವಲ್ಲಿ ಕೌಟುಂಬಿಕ ಹಿಂಸೆ ತಡೆ ಕಾಯ್ದೆ ವರದಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಸವರಾಜು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ  ಲಕ್ಷ್ಮೀಕಾಂತಮ್ಮ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಬಸವರಾಜಪ್ಪ ಸ್ವಾಗತಿಸಿದರು. ಮಹೇಶ್ವರಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.