ADVERTISEMENT

ಗಣೇಶ ವಿಗ್ರಹ ಮೆರವಣಿಗೆ; ಗಂಧರ್ವ ಲೋಕ ಧರೆಗೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 9:21 IST
Last Updated 18 ಸೆಪ್ಟೆಂಬರ್ 2013, 9:21 IST

ಭದ್ರಾವತಿ: ಇಲ್ಲಿನ ಪ್ರತಿಷ್ಠಿತ ಹಿಂದೂ ಮಹಾಸಭಾ–ಹಿಂದೂ ರಾಷ್ಟ್ರಸೇನಾ ಗಣಪತಿ ವಿಸರ್ಜನಾ ಮೆರವಣಿಗೆ ಮಂಗಳವಾರ ಅದ್ದೂರಿ ಹಾಗೂ ಶಾಂತಿಯುತವಾಗಿ ನಡೆಯಿತು.

ನಿಗದಿತ ಸಮಯಕ್ಕಿಂತ ಗಂಟೆ ತಡವಾಗಿ ಹೊಸಮನೆ ಗಣಪತಿ ಪ್ರತಿಷ್ಠಾಪನಾ ಸ್ಥಳದಿಂದ ಆರಂಭವಾದ ಮೆರವಣಿಗೆಗೆ ಶಾಸಕ ಎಂ.ಜೆ.ಅಪ್ಪಾಜಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಡೊಳ್ಳು, ವೀರಗಾಸೆ, ಚಟ್ಟಿಮೇಳ, ನಾದಸ್ವರ, ಕೋಲಾಟ, ಭಜನೆ, ಅದ್ದೂರಿ ಸಂಗೀತದ ಮೈಕ್‌ ಅಬ್ಬರ... ನಡುವೆ ಆರಂಭವಾದ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಯಸ್ಸಿನ ಅಂತರವಿಲ್ಲದೇ, ಅದರಲ್ಲೂ ವಿಶೇಷವಾಗಿ ಯುವ ಸಮೂಹ ಸುಮಾರು ಐದು ಕಿ.ಮೀ. ಸಾಗುವ ಮೆರವಣಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕುವ ಮೂಲಕ ಹಿರಿಯರ ಉತ್ಸಾಹ ಹೆಚ್ಚು ಮಾಡಿದರು.

ಹಿಂದೂ ಮಹಾಸಭಾ ಅಧ್ಯಕ್ಷ ವಿ.ಕದಿರೇಶ್‌, ಗೌರವಾಧ್ಯಕ್ಷ ಎ.ಈಶ್ವರರಾವ್‌ ಬಂಡಲ್ಕರ್‌, ಶಾಸಕ ಎಂ.ಜೆ.ಅಪ್ಪಾಜಿ, ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ, ಸಭಾದ ಮುಖಂಡರಾದ ಟಿ.ಎಸ್‌. ಭವಾನಿಕುಮಾರ್‌, ಎಂ.ಪ್ರಭಾಕರ್‌, ಮಣಿ, ನಗರಸಭಾ ಸದಸ್ಯ ಜಿ.ಆನಂದಕುಮಾರ್‌, ಮಾಜಿ ಅಧ್ಯಕ್ಷ ಆರ್‌.ಕರುಣಾಮೂರ್ತಿ, ಬಿ.ಟಿ.ನಾಗರಾಜ್‌ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು, ವಿವಿಧ ಪಕ್ಷದ ಮುಖಂಡರು ಮೆರವಣಿಗೆ ಜತೆ ಹೆಜ್ಜೆ ಹಾಕಿದ್ದು ಈ ಬಾರಿಯ ವಿಶೇಷ.

ಶಾಂತಿಯುತ ವಿಸರ್ಜನೆ: ಏಳು ಗಂಟೆಗಳ ಕಾಲ ಸಂಚರಿಸಿದ ಅದ್ದೂರಿ ಮೆರವಣಿಗೆ ನಂತರ ಸಂಜೆ 7ರ ಸುಮಾರಿಗೆ ಗಣಪತಿ ವಿಸರ್ಜನೆ ಭದ್ರಾನದಿಯಲ್ಲಿ ಶಾಂತಿಯುತವಾಗಿ ನಡೆಯಿತು.

ಈ ಸಂದರ್ಭದಲ್ಲಿ ಎಸ್ಪಿ ಕೌಶಲೇಂದ್ರ ಕುಮಾರ್‌, ಉಪ ವಿಭಾಗಾಧಿಕಾರಿ ಕುಸುಮಕುಮಾರಿ, ತಹಶೀಲ್ದಾರ್‌ ಸಿದ್ದಮಲ್ಲಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ತಿರುಮಲೇಶ್‌, ಪರಶುರಾಮಪ್ಪ ಸೇರಿದಂತೆ ವಿವಿಧ ಊರುಗಳಿಂದ ಆಗಮಿಸಿದ್ದ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತು ಉಸ್ತುವಾರಿ ವಹಿಸಿದ್ದರು.

ಪ್ರಸಾದದ ಸುರಿಮಳೆ...
ಕಾಯಿ ಹೋಳಿಗೆ, ಇಡ್ಲಿ, ವಡೆ, ಪೊಂಗಲ್‌, ಗೀರೈಸ್‌, ಪಲಾವ್‌, ಚಿತ್ರಾನ್ನ, ಲಡ್ಡು, ಕೇಸರಿಬಾತ್‌... ಇದ್ಯಾವುದು ಹೋಟೆಲ್‌ ಮೆನು ಅಲ್ಲ. ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಸುಮಾರು 20ಕ್ಕೂ ಹೆಚ್ಚು ಕಡೆ ವಿತರಿಸಿದ ತಿಂಡಿ ತಿನುಸು ವಿವರ.

ಹೌದು! ಆರಂಭವಾದ ಸ್ಥಳದಿಂದ ಹಿಡಿದು ಅದು ಸಾಗಿದ ಹಾದಿಯಲ್ಲಿ ಅಲ್ಲಿನ ಸಂಘ, ಸಂಸ್ಥೆಗಳು, ಯುವಕರ ತಂಡಗಳು ಸಾಗಿ ಬರುತ್ತಿದ್ದ ಜನರಿಗೆ ಪ್ರಸಾದದ ಹೆಸರಿನಲ್ಲಿ ವಿತರಣೆ ಮಾಡುತ್ತಿದ್ದ ತಿಂಡಿಗಳ ಸಾಲು ಹೀಗಿತ್ತು.

ಮಧ್ಯಾಹ್ನ ವೇಳೆಗೆ ಈ ಮೆನುವಿನಲ್ಲಿ ಒಂದಿಷ್ಟು ಬದಲಾವಣೆ ಕಂಡು ಕೋಸಂಬರಿ, ಪಾನಕ, ಮಜ್ಜಿಗೆ ಹಾಗೂ ಇನ್ನಿತರೆ ಹಣ್ಣುಗಳ ವಿತರಣೆ ನಡೆದಿದ್ದು ವಿಶೇಷವಾಗಿತ್ತು. ಹೊಸಮನೆ ವೃತ್ತ, ತಮಿಳು ಶಾಲೆ, ವಿನಾಯಕ ಟಾಕೀಸ್‌ ಮುಂಭಾಗ, ರಂಗಪ್ಪ ವೃತ್ತ, ತರೀಕೆರೆ ರಸ್ತೆ, ಚಾಮೇಗೌಡ ತಿರುವು, ಹಾಲಪ್ಪ ವೃತ್ತ, ಬಸ್‌ನಿಲ್ದಾಣ ಆಟೋ ನಿಲ್ದಾಣ... ಹೀಗೆ ಹಲವೆಡೆ ಇದರ ವಿತರಣೆ ಭರ್ಜರಿಯಾಗಿ ನಡೆಯಿತು.

ಇದರ ನಡುವೆ ಕೆಲವು ಯುವಕರ ತಂಡ ಪ್ಯಾಕ್‌ ಮಾಡಿದ ಸುಮಾರು ಐದು ಸಾವಿರ ಲಡ್ಡು ವಿತರಣೆ ಮಾಡಿದರೆ, ಸುಮಾರು ಮೂರು ಸಾವಿರ ಕಾಯಿ ಹೋಳಿಗೆ ರುಚಿ ಉಣಿಸಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.