ADVERTISEMENT

ಗರಿಗೆದರಿದ ನಾಟಿ ಕಾರ್ಯ

ಟಿ.ರಾಮಚಂದ್ರ ರಾವ್
Published 28 ಜುಲೈ 2011, 9:10 IST
Last Updated 28 ಜುಲೈ 2011, 9:10 IST

ರಿಪ್ಪನ್‌ಪೇಟೆ:  ಮುಂಗಾರು ಮಳೆ ಉತ್ತಮವಾಗಿದ್ದು ಇಲ್ಲಿನ ರೈತರು ಕೃಷಿಕಾರ್ಯವನ್ನು ಚುರುಕು ಗೊಳಿಸಿದ್ದಾರೆ. 

 ಜೂನ್ ಪ್ರಾರಂಭದಲ್ಲಿ ಬಿಡುವು ನೀಡದ ಮಳೆಯಿಂದ  ಬತ್ತದ ಕೃಷಿ ಚಟುವಟಿಕೆ ಮಂದಗತಿಯಲ್ಲಿ ಸಾಗಿತ್ತು. ಈಗ ಮಳೆ ಬಿಡುವು ನೀಡಿದ್ದು, ಮುಸುಕಿನ ಜೋಳ ಬಿತ್ತನೆ ಹಾಗೂ ಬತ್ತದ ನಾಟಿ ಕಾರ್ಯವು ಗರಿಗೆದರಿದೆ.

ಇಲ್ಲಿನ  ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 7,055 ಹೆಕ್ಟೇರ್ ಸಾಗುವಳಿ ವಿಸ್ತೀರ್ಣವಿದ್ದು, ಮುಂಗಾರಿನ  ಕೃಷಿಗಾಗಿ ಬತ್ತ 4,100 ಹೆಕ್ಟೇರ್,  ಮುಸುಕಿನ ಜೋಳ 1,200 ಹೆಕ್ಟೇರ್, ಶೇಂಗಾ 120ಹೆಕ್ಟೇರ್, ಕಬ್ಬು 105 ಹೆಕ್ಟೇರ್, ಹತ್ತಿ 65 ಹೆಕ್ಟೇರ್, ತೊಗರಿ 30 ಹೆಕ್ಟೇರ್, ಬೆಳೆ ತೆಗೆಯುವ ಗುರಿ ಪ್ರಸಕ್ತ ಸಾಲಿನಲ್ಲಿ ಹೊಂದಲಾಗಿದೆ. ಉಳಿದ ಸಾಗುವಳಿ ಕ್ಷೇತ್ರ 1,435 ಹೆಕ್ಟೇರ್‌ನಲ್ಲಿ ತೋಟಗಾರಿಕೆ , ರಬ್ಬರ್, ಅಕೇಶಿಯಾ, ಅಡಿಕೆ, ಶುಂಠಿ ಹಾಗೂ ಇತರೆ ಬೆಳೆ ತೆಗೆಯಲಾಗುತ್ತಿದೆ.

 ದಾಖಲೆ ಮಳೆ
ಈ ವರ್ಷ ಜೂನ್‌ನಿಂದ ಜುಲೈ 23ರವರೆಗೆ 821.2 ಮಿ.ಮೀ. ದಾಖಲೆ ಮಳೆ ಸುರಿದಿದೆ. ಕಳೆದ ವರ್ಷ ಜುಲೈ ಅಂತ್ಯಕ್ಕೆ 679ಮಿ.ಮೀ. ಮಳೆ ಆಗಿತ್ತು. ಈ ವರ್ಷ ಏಪ್ರಿಲ್‌ನಿಂದ ಈ ವರೆಗೆ 1,062 ಮಿ.ಮೀ. ಮಳೆ ಬಿದ್ದರೆ,  ಕಳೆದ ವರ್ಷ ಜುಲೈ ಅಂತ್ಯಕ್ಕೆ 804.8 ಮಿ.ಮೀ. ಮಳೆಯಾಗಿತ್ತು.

ಆರ್ಥಿಕ ಬೆಳೆ ಶುಂಠಿ
 ಈ ಭಾಗದಲ್ಲಿ ಆರ್ಥಿಕವಾಗಿ ಕೈ ಹಿಡಿದ ಶುಂಠಿ ಬೆಳೆಯತ್ತ ರೈತರು ಹೆಚ್ಚಿನ ಚಿತ್ತ ಹರಿಸಿದ್ದು, ರೈತರ ಹಕ್ಕಲು ಭೂಮಿಯನ್ನು ಬಹುಪಾಲು ಭಾಗ ರಬ್ಬರ್ ಬೆಳೆ ಆಕ್ರಮಿಸಿದೆ.

ಈ ಬಾರಿ ರೈತರಿಗೆ ಆಗತ್ಯವಾದ ಬೀಜದ ಬತ್ತ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ  ಹಾಗೂ ಮುಸುಕಿನ ಜೋಳದ ಬೀಜ ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡಲಾಗುತ್ತಿದೆ. ಬೀಜದ ಬತ್ತ ಪ್ರತಿ ಕೆ.ಜಿ. ಗೆ ರೂ 9.50 ಹಾಗೂ ಮುಸುಕಿನ ಜೋಳ ರೂ 30.00 ರಿಯಾಯ್ತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು  ಸಹಾಯಕ ಕೃಷಿ ಅಧಿಕಾರಿ ಬಿ.ಕೆ. ರಾಘವೇಂದ್ರ ತಿಳಿಸಿದ್ದಾರೆ.

ರೈತ ಸಂಪರ್ಕ ಕೇಂದ್ರದಲ್ಲಿ  ಅಭಿಲಾಷ್ 30 ಕ್ವಿಂಟಲ್,  ತುಂಗಾ 40ಕ್ವಿಂಟಲ್, ಜ್ಯೋತಿ 70 ಕ್ವಿಂಟಲ್, ಎಂ.ಟಿ.ಯು1,001-250 ಕ್ವಿಂಟಲ್‌ಜೆ.ಜೆ.ಎಲ್ ಸೋನಾ 120 ಕ್ವಿಂಟಲ್, ಐಆರ್ 64 -20 ಕ್ವಿಂಟಲ್ ಹಾಗೂ ಇತರೆ 12 ಕ್ವಿಂಟಲ್ ಸೇರಿದಂತೆ ಇದುವರೆಗೆ 542 ಕ್ವಿಂಟಲ್  ಬೀಜದ ಬತ್ತ ಮಾರಾಟವಾಗಿದೆ.

ಮುಸುಕಿನ ಜೋಳ - ಲಕ್ಷ್ಮೀ , ಸಂಪನ್ನ, ಕಾವೇರಿ, ಸಿ.ಪಿ. 818,  ಟಾಪ್ ಸ್ಟಾರ್, ಟಾಪ್ ಕ್ಲಾಸ್, ಬಯೋಸೀಡ್ ಸನ್ನಿ 777 ಹಾಗೂ ಅಜಯ್ ಜಾತಿಯ ಬೀಜ ಸೇರಿದಂತೆ 120 ಕ್ವಿಂಟಲ್ ದಾಸ್ತಾನು ಮಾಡಲಾಗಿದ್ದು, ಈಗಾಗಲೆ 75 ಕ್ವಿಂಟಲ್ ಮಾರಾಟವಾಗಿದೆ.  ಅಲ್ಲದೇ, ರೈತರಿಗೆ ಅಗತ್ಯವಿರುವ ಕೃಷಿ ಸಲಕರಣೆಗಳು ಕೃಷಿ ಇಲಾಖೆಯಲ್ಲಿ ಲಭ್ಯವಿದೆ ಎಂದು  ಎಂದು ಕೃಷಿ ಅಧಿಕಾರಿ ವಿ.ಎಂ. ಶಂಕರಪ್ಪ ತಿಳಿಸಿದ್ದಾರೆ. 

ಕೂಲಿಕಾರರ ಸಮಸ್ಯೆ
ಬತ್ತದ ನಾಟಿ ಕಾರ್ಯಕ್ಕೆ ಕೂಲಿಕಾರರ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದ ಕೆಲವೆಡೆ ಸ್ವಸಹಾಯ ಗುಂಪುಗಳ ಸದಸ್ಯರು ಸಂಘಟಿತರಾಗಿ ಆಳುಗಳಾಗಿ ಕೆಲಸಕ್ಕೆ ತೆರಳುತ್ತಿದ್ದಾರೆ. ನಿತ್ಯ ವಾಹನ ವ್ಯವಸ್ಥೆ  ಊಟ ಉಪಚಾರ ಸೇರಿದಂತೆ ಹೆಣ್ಣಾಳಿಗೆ 150 ಹಾಗೂ ಗಂಡಾಳಿಗೆ 200ರೂ ಸಂಬಳ ನೀಡಿದರೂ ಬತ್ತದ ಕೃಷಿಗೆ ಕೂಲಿಕಾರರ ಸಮಸ್ಯೆಗೆ ಪರಿಹಾರ ದಕ್ಕಿಲ್ಲ. 

ಬೇಸಾಯ, ಬೀಜ,ಗೊಬ್ಬರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲವೆಂಬುದು ರೈತರು ಕೊರಗು. ಒಂದೆಡೆ ಕೂಲಿಕಾರರ ಸಮಸ್ಯೆ ಹಾಗೂ ಬತ್ತದ ಧಾರಣೆ ಕುಸಿತದಿಂದ ಕಂಗೆಟ್ಟ ರೈತ ಈ ವರ್ಷ ಸುಮಾರು 150 ಹೆಕ್ಟೇರ್  ಪ್ರದೇಶದಲ್ಲಿ ಬತ್ತದ ಕೃಷಿ ಮಾಡದೆ ಕೈಬಿಟ್ಟಿದ್ದಾರೆ.
       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.