ADVERTISEMENT

ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದ ಸರ್ಕಾರಿ ಜೆ.ಸಿ. ಆಸ್ಪತ್ರೆ: ಕಿಮ್ಮನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 9:23 IST
Last Updated 28 ನವೆಂಬರ್ 2017, 9:23 IST

ತೀರ್ಥಹಳ್ಳಿ: ಸರ್ಕಾರ ಹಾಗೂ ದಾನಿಗಳ ನೆರವಿನಿಂದ ತೀರ್ಥಹಳ್ಳಿಯ ಸರ್ಕಾರಿ ಜೆಸಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯಲ್ಲಿಯೇ ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆ ಪ್ರಥಮ ಸ್ಥಾನ ಪಡೆದಿದೆ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದರು.

ಸೋಮವಾರ ಜೆ.ಸಿ. ಆಸ್ಪತ್ರೆ ಪ್ರಾಂಗಣದಲ್ಲಿ ಪೊಲೀಸ್‌ ಚೌಕಿ ಉದ್ಘಾಟಿಸಿ ಮಾತನಾಡಿದ ಅವರು, ‘ಸಾರ್ವಜನಿಕರ ಹಿತ ದೃಷ್ಟಿಯಿಂದ ಆಸ್ಪತ್ರೆ ಮುಂಭಾಗ ಪೊಲೀಸ್‌ ಚೌಕಿಯ ಅಗತ್ಯವಿತ್ತು. ಸರ್ಕಾರದ ಆದೇಶದಂತೆ ಈಗ ಪೊಲೀಸ್‌ ಚೌಕಿ ಕಾರ್ಯ ಆರಂಭಿಸಲಿದೆ’ ಎಂದರು.

ಅಪಘಾತ, ಹೊಡೆದಾಟ ಮುಂತಾದ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆ ಪ್ರಾಂಗಣದ ಒಳಗೆ ನಡೆಯಬಹುದಾದ ಕಾನೂನುಬಾಹಿರ ಚಟುವಟಿಕೆ ತಡೆಯಲು ಪೋಲೀಸ್ ಚೌಕಿ ನೆರವಾಗಲಿದೆ. ಕೆಲವೊಮ್ಮೆ ಆಸ್ಪತ್ರೆ ಮುಂಭಾಗ ಜನದಟ್ಟಣೆ ಹೆಚ್ಚಾಗಿ, ರೋಗಿಗಳಿಗೆ ಉಂಟಾಗುವ ತೊಂದರೆ ತಪ್ಪಿಸಲು ಪೊಲೀಸರ ನಿಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ADVERTISEMENT

ಆಸ್ಪತ್ರೆ ಅಭಿವೃದ್ಧಿಗೆ ನೆರವಾದ ದಾನಿಗಳ ಹೆಸರಿನ ನಾಮಫಲಕ ಹಾಕುವುದು ಒಳ್ಳೆಯದು. ಇದರಿಂದ ಪ್ರೇರೇಪಣೆಗೊಂಡು ದಾನ ನೀಡುವವರು ಮುಂದೆ ಬರಬಹುದು. ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮ ವಹಿಸಲಾಗಿದೆ ಎಂದು ಕಿಮ್ಮನೆ ಹೇಳಿದರು.

ಪೊಲೀಸ್‌ ವೃತ್ತ ನಿರೀಕ್ಷಕ ಸುರೇಶ್‌ ಮಾತನಾಡಿ, ‘ತುರ್ತು ಸಂದರ್ಭದ ಮಾಹಿತಿ ಪಡೆಯಲು ಪೊಲೀಸರಿಗೆ ಕಷ್ಟವಾಗುತ್ತಿತ್ತು. ಪೊಲೀಸ್‌ ಚೌಕಿ ಇಲ್ಲದೇ ಇರುವುದರಿಂದ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ತೊಡಕು ಉಂಟಾಗಿತ್ತು. ಆಸ್ಪತ್ರೆ ಮುಂಭಾಗದಲ್ಲಿಯೇ ಪೊಲೀಸ್‌ ಚೌಕಿ ಆರಂಭವಾಗಿರುವುದರಿಂದ ಅಹಿತಕರ ಘಟನೆಗಳನ್ನು ತಪ್ಪಿಸಲು, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ’ ಎಂದರು.

ಜೆ.ಸಿ. ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್‌ ಮಾತನಾಡಿ, ‘ಆಸ್ಪತ್ರೆ ಪ್ರಾಂಗಣದಲ್ಲಿ ಪೊಲೀಸ್‌ ಚೌಕಿ ಸ್ಥಾಪಿಸುವುದರಿಂದ ಕಾನೂನುಬಾಹಿರ ಚಟುವಟಿಕೆಗೆ ಕಡಿವಾಣ ಹಾಕಲು ಸಾಧ್ಯ. ಶುಚಿತ್ವ, ಸಿಬ್ಬಂದಿ ಸುರಕ್ಷತೆ, ತುರ್ತು ಸಂದರ್ಭಗಳ ನಿರ್ವಹಣೆಗೆ ರಕ್ಷಣೆ ತುಂಬಾ ಅಗತ್ಯವಾಗಿದ್ದು, ಪೊಲೀಸ್‌ ಸಿಬ್ಬಂದಿಯ ನಿಯೋಜನೆಯಿಂದ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಜಗದೀಶ್‌, ಕಂಬ್ಳಿಗೆರೆ ಧರ್ಮನಾಯ್ಕ್‌, ಹರುಮನೆ ರಮಾನಂದ, ಮೇಲಿನಕೊಪ್ಪ ದೇವರಾಜ್‌, ಗೋಪಾಲ, ಪಟ್ಟಣ ಪಂಚಾಯ್ತಿ ಸದಸ್ಯ ಡಾ.ಅನಿಲ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಿ. ಸತೀಶ್‌, ಪಿಎಸ್‌ಐ ಭರತ್‌ ಕುಮಾರ್‌, ಜೆ.ಸಿ. ಆಸ್ಪತ್ರೆ ವೈದ್ಯ ಸಿಬ್ಬಂದಿಯಾದ ಡಾ.ಗಣೇಶ್‌ ಭಟ್‌, ಡಾ.ಪ್ರಭಾಕರ್‌, ಡಾ.ಗುರುರಾಜ್‌, ಡಾ.ಗಿರೀಶ್‌, ಡಾ.ಮಹಿಮಾ, ಡಾ.ನಿಶ್ಚಲ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.