ADVERTISEMENT

ಜಿಲ್ಲೆಯ ಜನರ ಶ್ರೀರಕ್ಷೆ ಇರಲಿ: ಶಿವಣ್ಣ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ಶಿರಾಳಕೊಪ್ಪ: ‘ಜಿಲ್ಲೆಯ ಮಗಳಾದ ಗೀತಾ ಶಿವರಾಜ್‌ಕುಮಾರ್ ಅವರನ್ನು ತಮ್ಮ ಮಡಿಲಿಗೆ ಹಾಕುತ್ತಿದ್ದು, ಎಲ್ಲರ  ಶ್ರೀರಕ್ಷೆ ತಮ್ಮ ಕುಟುಂಬದ ಮೇಲೆ ಇರಲಿ’ ಎಂದು ನಟ ಶಿವರಾಜ್‌ಕುಮಾರ್‌ ಮನವಿ ಮಾಡಿದರು.

ಭಾನುವಾರ ಬೆಂಗಳೂರಿನಿಂದ ಸೊರಬಕ್ಕೆ ಹೋಗುತ್ತಿದ್ದ ಮಾರ್ಗ ಮಧ್ಯೆ ಶಿರಾಳಕೊಪ್ಪ ಪಟ್ಟಣದಲ್ಲಿ ಅಡ್ಡಗಟ್ಟಿದ ಅಭಿಮಾನಿಗಳ ಬಳಿ ಅಭಿಪ್ರಾಯ ಹಂಚಿಕೊಂಡರು.

ಗೀತಾ ಶಿವರಾಜ್ ಕುಮಾರ್ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ತನ್ನ ಎಲ್ಲಾ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿ ಯಶಸ್ಸು ಕಂಡಿದ್ದು. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಜನರು ಆರ್ಶಿವಾದ ಮಾಡಿದರೆ ಅಷ್ಟೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಾರೆ ಎಂದು ಭರವಸೆ ನೀಡಿದರು.

ರಸ್ತೆ ಸಂಚಾರ ವ್ಯತ್ಯಯ: ಈ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ನಂತರ ಪೊಲೀಸರು ಧಾವಿಸಿ ಸಾರ್ವಜನಿಕರ ವಾಹನ ಸಂಚರಿಸಲು ಅನುವು ಮಾಡಿಕೊಟ್ಟರು.

ಜೆಡಿಎಸ್ ಮುಖಂಡ ಎಚ್.ಟಿ.ಬಳಿಗಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಖ್ಬುಲ್ ಸಾಬ್,  ಶಿಕಾರಿಪುರ ಘಟಕದ ಅಧ್ಯಕ್ಷ ಮಲ್ಲೇಶಪ್ಪ, ಹಿರೇಜಂಬೂರು ಚಂದ್ರಪ್ಪ, ಮುಗಳಿಕೊಪ್ಪ ರಾಜು, ಶಿರಾಳಕೊಪ್ಪ ಘಟಕದ ಅಧ್ಯಕ್ಷ ಪರ್ವಿಜ್ ಅಹ್ಮದ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಅಭಿಮಾನಿಗಳ ನೂಕು ನುಗ್ಗಲು: ಲಾಠಿ ಚಾರ್ಜ್‌
ಶಿಕಾರಿಪುರ:  ನಟ ಶಿವರಾಜ್‌ ಕುಮಾರ್‌ ಹಾಗೂ ಜೆಡಿಎಸ್‌ ಲೋಕಸಭಾ ಅಭ್ಯರ್ಥಿ ಗೀತಾ ಭಾನುವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿದಾಗ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಸಂದರ್ಭದಲ್ಲಿ ಅಭಿಮಾನಿಗಳ ನೂಕು ನುಗ್ಗಲಾಗಿ ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿ ಲಾಠಿ ರುಚಿ ತೋರಿಸಿದರು.

ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಸೋಮವಾರ ನಾಮಪತ್ರ ಸಲ್ಲಿಸುವ ಹಿನ್ನೆಲೆ ಸೊರಬದಿಂದ ಶಿಕಾರಿಪುರ ಮಾರ್ಗವಾಗಿ ನಟ ಶಿವರಾಜ್‌ ಕುಮಾರ್‌ ಜತೆ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಾರೆ ಎಂಬ ಸುದ್ದಿ ಹರಡಿದ ಹಿನ್ನೆಲೆ ಭಾನುವಾರ ಸಂಜೆಯಿಂದಲೇ ಗೀತಾ ಹಾಗೂ ನಟ ಶಿವರಾಜ್‌ಕುಮಾರ್‌ ಅವರನ್ನು ವೀಕ್ಷಿಸಲು ಬಸ್‌ನಿಲ್ದಾಣ ಸಮೀಪ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ರಾತ್ರಿ 9.30ಕ್ಕೆ ಜೆಡಿಎಸ್‌ ಅಭ್ಯರ್ಥಿ ಗೀತಾ ಜತೆ ಕಾರನ್ನು ಚಾಲನೆ ಮಾಡುತ್ತಾ ನಟ ಶಿವರಾಜ್‌ ಕುಮಾರ್‌ ಪಟ್ಟಣದ ಬಸ್‌ ನಿಲ್ದಾಣ ಸಮೀಪ ಆಗಮಿಸಿದರು. ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು.

ಶಿವರಾಜ್‌ಕುಮಾರ್‌ ವೀಕ್ಷಿಸಲು ಕಾರಿನ ಸಮೀಪ ಅಭಿಮಾನಿಗಳು ಜಮಾವಣೆ ಗೊಂಡಿದ್ದರಿಂದ ಕಾರು ಮುಂದಕ್ಕೆ ಚಲಿಸದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿ ಅಭಿಮಾನಿಗಳನ್ನು ನಿಯಂತ್ರಿಸಲು ಹರ ಸಾಹಸಪಟ್ಟರು. ಪರಿಸ್ಥಿತಿ ಕೈ ಮೀರಿದಾಗ ಸಿಬ್ಬಂದಿ ಕೆಲವರಿಗೆ ಲಾಠಿ ರುಚಿ ತೋರಿಸಿ ಕಾರು ಮುಂದೆ ಚಲಿಸಲು ನೆರವಾದರು.

ನಂತರ ನಟ ಶಿವರಾಜ್‌ಕುಮಾರ್‌ ಕಾರು ಮೇಲೆ ನಿಂತು ಕಡೆ ಕೈ ಬೀಸಿದಾಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಶಾಸಕರಾದ ಮಧುಬಂಗಾರಪ್ಪ ಹಾಗೂ ಜೆಡಿಎಸ್‌ ಮುಖಂಡ ಎಚ್‌.ಟಿ.ಬಳಿಗಾರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT