ADVERTISEMENT

ಜೆ.ಎಚ್‌.ಪಟೇಲ್‌ ಮೊಮ್ಮಗ ಎಂದು ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 10:21 IST
Last Updated 3 ಅಕ್ಟೋಬರ್ 2017, 10:21 IST

ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರ ಮೊಮ್ಮಗ ಎಂದು ಪರಿಚಯಿಸಿಕೊಂಡು ಅಧಿಕಾರಿ, ಗುತ್ತಿಗೆದಾರರು, ರಾಜಕಾರಣಿಗಳಿಂದ ಹಣಕ್ಕಾಗಿ ಬೆದರಿಕೆಯೊಡ್ಡುತ್ತಿದ್ದ ಆರೋಪದ ಮೇಲೆ ಭಾನುವಾರ ಅರುಣ್‌ ಕುಮಾರ್‌ (28) ಅಲಿಯಾಸ್‌ ಅರುಣ್‌ ಪಟೇಲ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅಪ ಪ್ರಚಾರ, ಅವಾಚ್ಯ ಶಬ್ದಗಳಿಂದ ನಿಂದನೆ ಕುರಿತು ಶಾಸಕ ಕಿಮ್ಮನೆ ರತ್ನಾಕರ ಅವರು ಈತನ ವಿರುದ್ಧ ಠಾಣೆಗೆ ಪತ್ರ ನೀಡಿದ್ದು, ಈ ಕುರಿತು ತನಿಖೆ ತೀವ್ರಗೊಂಡಿದೆ.

ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಅರುಣ ಕುಮಾರ್‌ಗೆ ತೀರ್ಥಹಳ್ಳಿ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಜೆ.ಎಚ್‌.ಪಟೇಲ್‌ ಮೊಮ್ಮಗ, ಪಟೇಲ್‌ ಪ್ರತಿಷ್ಠಾನದ ಸಂಚಾಲಕ, ಮಾಜಿ ಶಾಸಕ ಮಹಿಮ ಪಟೇಲ್‌ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡಿದ್ದ ಅರುಣ್‌ ಕುಮಾರ್‌ ಅನೇಕರನ್ನು ವಂಚಿಸುವ ಪ್ರಯತ್ನದಲ್ಲಿದ್ದಾಗ ಸಾರ್ವಜನಿಕವಾಗಿ ಸಿಕ್ಕಿಬಿದ್ದಿದ್ದ.

ADVERTISEMENT

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಲವು ತಿಂಗಳಿನಿಂದ ಸಂಚರಿಸುತ್ತಿದ್ದ ಅರುಣ್‌ ಕುಮಾರ್‌ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ನಾಟಕವಾಡುತ್ತಿದ್ದ. ದೇವಸ್ಥಾನ, ಸೇತುವೆ, ಗ್ರಾಮಗಳ ಅಭಿವೃದ್ಧಿಗೆ ಹಣ ಮಂಜೂರು ಮಾಡಿಸುವುದಾಗಿ ಹೇಳಿ, ಹಣ ಕೀಳುತ್ತಿದ್ದ ಎಂದು ಅವನ ಕುರಿತು ಆರೋಪ ವ್ಯಕ್ತವಾಗಿತ್ತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ 11 ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಅರುಣ್‌ ಕುಮಾರ್‌ ಗುತ್ತಿಗೆದಾರರೊಬ್ಬರಿಗೆ ಹಣ ಕೊಡುವಂತೆ ಪೀಡಿಸಿದ್ದ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ. ಈತನ ವಿರುದ್ಧ ಬ್ಲಾಕ್‌ಮೇಲ್‌, ಹಣಕ್ಕೆ ಬೇಡಿಕೆ, ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.