ADVERTISEMENT

ಜೆಡಿಎಸ್‌ನಿಂದ ಅಚ್ಚರಿಯ ಅಭ್ಯರ್ಥಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 5:50 IST
Last Updated 3 ಸೆಪ್ಟೆಂಬರ್ 2013, 5:50 IST

ಶಿವಮೊಗ್ಗ: `ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದ ಗೆಲುವು ಜೆಡಿಎಸ್‌ನ ವಿಜಯದ ಸಂಕೇತ ಆಗಬೇಕು. ಈ ಮೂಲಕ ಎಸ್.ಬಂಗಾರಪ್ಪ ಅವರ ಆತ್ಮಕ್ಕೆ ಶಾಂತಿ ಸಲ್ಲಿಸಬೇಕಾಗಿದೆ' ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ದೈವಜ್ಞ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಲೋಕಸಭೆ ಚುನಾವಣೆಯನ್ನು ಬಂಗಾರಪ್ಪ ಅವರಿಗಾಗಿ ಗೆಲ್ಲಿಸಲೇ ಬೇಕಿದೆ. ಲೋಕಸಭೆ ಗೆಲವು ಬಂಗಾರಪ್ಪ ಅವರಿಗೆ ಗೌರವ ಅರ್ಪಣೆ ಆಗಬೇಕಿದೆ. ಇದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಮೈಕೊಡವಿ ಸಂಘಟನೆಯಲ್ಲಿ ತೊಡಗಬೇಕು ಎಂದರು.

ಚುನಾವಣೆಗೆ ಜೆಡಿಎಸ್ ಎಲ್ಲರೂ ಅಚ್ಚರಿಯಾಗುವ ಅಭ್ಯರ್ಥಿಯನ್ನೇ ನಿಲ್ಲಿಸಲಾಗುವುದು ಎಂದು ಕುತೂಹಲ ಮೂಡಿಸಿದ ಅವರು, ಈ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಸಹಕರಿಸಬೇಕು ಎಂದರು.

ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದ ದೇಶ ದಿವಾಳಿ ಆಗಿದೆ. ದೇವಸ್ಥಾನಗಳ ಚಿನ್ನಾಭರಣಗಳನ್ನು ಐ.ಎಂ.ಎಫ್‌ನಲ್ಲಿ ಒತ್ತೆ ಇಟ್ಟು ಸಾಲ ತಂದು ಸರ್ಕಾರ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಇಂತವರು ದೇಶಕ್ಕೆ ಆಹಾರ ಭದ್ರತೆ ಒದಗಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದ ಅವರು, ಇಂತಹ ಸರ್ಕಾರದಿಂದ ಭವಿಷ್ಯದ ಗತಿ ಏನು ಎಂದು ಪ್ರಶ್ನಿಸಿದರು.

50 ವರ್ಷ ಆಳ್ವಿಕೆ ನಡೆಸಿದ ಸರ್ಕಾರ ಬಡತನ ಏಕೆ ನಿವಾರಣೆ ಮಾಡಲಿಲ್ಲ? ಬಡತನ ನಿವಾರಣೆ ಮಾಡುವುದು ಬಿಟ್ಟು 1ರೂ.ಗೆ ಅಕ್ಕಿ ನೀಡಲು ಮುಂದಾಗಿದ್ದಾರೆ. `ಅನ್ನಭಾಗ್ಯ ಯೋಜನೆ'ಯನ್ನು ಎಷ್ಟು ದಿನ ನಡೆಸುತ್ತಾರೋ ನೋಡಬೇಕಿದೆ ಎಂದರು.

ಶಾಸಕ ಮಧು ಬಂಗಾರಪ್ಪ ಮಾತನಾಡಿ, `ನಮ್ಮ ಕುಟುಂಬದ ಸದಸ್ಯರು ಕಾಂಗ್ರೆಸ್‌ನಿಂದ ಲೋಕಸಭೆ ಚುನಾವಣೆಗೆ ನಿಲ್ಲುತ್ತಾರೆ. ಜೆಡಿಎಸ್‌ನಿಂದ ಅವರನ್ನು ಬೆಂಬಲಿಸಲಾಗುವುದು ಎಂದು ಕೆಲ ದಿನಗಳಿಂದ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ನಾವು ಜೆಡಿಎಸ್ ಅಭ್ಯರ್ಥಿ ಬಿಟ್ಟು ಬೇರೆ ಯಾರನ್ನೂ ಬೆಂಬಲಿಸುವುದಿಲ್ಲ' ಎಂದರು.

ಜಿಲ್ಲೆಯಲ್ಲಿ ಜೆಡಿಎಸ್ ಕಾಂಗ್ರೆಸ್‌ಗಿಂತಲೂ ಉತ್ತಮ ಸ್ಥಿತಿಯಲ್ಲಿ ಇದೆ. ಲೋಕಸಭೆ ಚುನಾವಣೆಗೆ ಪಕ್ಷದ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಒಳ್ಳೆಯ ಅಭ್ಯರ್ಥಿ ಹಾಕಿದ್ದಲ್ಲಿ, ಹಿರಿಯ ಶಾಸಕ ಎಂ.ಜೆ.ಅಪ್ಪಾಜಿ ಮಾರ್ಗದರ್ಶನದೊಂದಿಗೆ ಗೆದ್ದು ಬರುವುದೂ, ಬಂಗಾರಪ್ಪ ಅವರ ಹೆಸರು ಉಳಿಸುವುದೂ ಖಚಿತ ಎಂದರು.ಶಾಸಕಿ ಶಾರದಾ ಪೂರ‌್ಯನಾಯ್ಕ, ಮುಖಂಡರಾದ ಎಚ್.ಬಳಿಗಾರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿದರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಜಿ.ಮಾದಪ್ಪ, ಎಂ.ಪಿ.ಶಿವಣ್ಣ, ಕಡಿದಾಳ್ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಬಹಿರಂಗಗೊಂಡ ಅಸಮಾಧಾನ
ತೀರ್ಥಹಳ್ಳಿ ಕ್ಷೇತ್ರದ ಮುಖಂಡ ಆರ್.ಮದನ್ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷೆ ಪವಿತ್ರಾರಾಮಯ್ಯ ಅವರ ನಡುವಿನ ಅಸಮಾಧಾನ ಸಭೆಯಲ್ಲೇ ಬಹಿರಂಗಗೊಂಡು ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಮದನ್ ಮಾತನಾಡಿ, `ಜಿಲ್ಲೆಯಲ್ಲಿ ಬಹಳಷ್ಟು ರಾಜ್ಯ ನಾಯಕರು ಇದ್ದಾರೆ. ಅವರು ವಿಧಾನಸಭೆಯಲ್ಲಿ ಮದನ್, ಶ್ರೀಕಾಂತ್, ಶಾರದಾ ಪೂರ‌್ಯನಾಯ್ಕ ಸೋಲಬೇಕು ಎಂದು ಪ್ರಚಾರ ಮಾಡಿಕೊಂಡು ತಿರುಗಿದರು. ಇದೇ ರೀತಿ ಲೋಕಸಭೆ ಚುನಾವಣೆಯಲ್ಲಿ ನಡೆದುಕೊಳ್ಳದೇ ನನ್ನ ಬಗ್ಗೆ ಅಸಮಾಧಾನ ಇದ್ದರೆ ನನ್ನ ಬಳಿ ಬಂದು ಚರ್ಚಿಸಲಿ; ಸಮಸ್ಯೆ ಬಗೆಹರಿಸಿಕೊಳ್ಳಲಿ. ಕುಮಾರಸ್ವಾಮಿ ಜಿಲ್ಲೆಗೆ ಬಂದಾಗ ಸಭೆಗಳಿಗೆ ಹಾಜರಾಗುವ ಅವರು, ಪಕ್ಷದ ಕೆಲಸಗಳಲ್ಲೂ ತೊಡಗಿಸಿಕೊಳ್ಳಲಿ' ಎಂದು ರಾಜ್ಯ ಉಪಾಧ್ಯಕ್ಷೆ ಪವಿತ್ರಾರಾಮಯ್ಯ ಅವರನ್ನು ಪರೋಕ್ಷವಾಗಿ ಕುಟುಕಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಪವಿತ್ರಾರಾಮಯ್ಯ, `ನಾನು ಯಾರ ವಿರುದ್ಧವೂ ಕೆಲಸ ಮಾಡಿಲ್ಲ. ಯಾರು ಸೋಲಬೇಕು ಎಂದೂ ಹೇಳಿಲ್ಲ. ನಾನು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಚುನಾವಣೆ ಖರ್ಚು ನೋಡಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಕೊಂಡು ಬಂದ ಮದನ್ ನನಗೆ ನೀಡಿದ್ದು, ಕೇವಲ ರೂ.35 ಸಾವಿರ ಇದ್ದ ಕವರ್ ಮಾತ್ರ' ಎಂದು ಕಿಡಿಕಾರಿದರು.

ಇದರಿಂದ ಉದ್ರಿಕ್ತಗೊಂಡ ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಪವಿತ್ರಾ ರಾಮಯ್ಯ ಮಾತಿಗೆ ಅಡ್ಡಿಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಹೊತ್ತು ಗೊಂದಲ ನಿರ್ಮಾಣ ಆಗಿತ್ತು. ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ, `ಮದನ್ ತಾಳ್ಮೆಯಿಂದ ಇರಬೇಕು. ರೌಡಿಪಟ್ಟ ಇರಬೇಕು; ರೌಡಿತನ ನೇರವಾಗಿ ಹೊಡೆಯುವುದರಲ್ಲಿ ಇರುವುದಿಲ್ಲ. ಹೊಡೆಯುವ ಸಂದರ್ಭದಲ್ಲಿ ಹೊಡೆಯಬೇಕು' ಎಂದು ನೇರವಾಗಿ ಹೇಳಿದರು.

`ಹೆಚ್ಚು ದುಡ್ಡು ಕೊಡಿ'
ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ, ಚುನಾವಣೆ ಎಂದರೆ ಸುಮ್ಮನೆ ಅಲ್ಲ; ಹೋರಾಟ ಮಾಡಬೇಕು. ಜಿಲ್ಲಾದಾದ್ಯಂತ ಪ್ರವಾಸ ಮಾಡಬೇಕು. ಇದಕ್ಕೆ ಹಣ ಬೇಕು. ಪಕ್ಷ ಒಳ್ಳೆಯ ಅಭ್ಯರ್ಥಿ, ಹೆಚ್ಚಿನ ದುಡ್ಡು ನೀಡಿದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.