ADVERTISEMENT

ಜೈನ ವಾಸ್ತು, ಹೈಕೋರ್ಟ್ ಆದೇಶ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:20 IST
Last Updated 3 ಅಕ್ಟೋಬರ್ 2011, 6:20 IST

ಹೊಸನಗರ: ಜೈನ ತೀರ್ಥಕ್ಷೇತ್ರ ಹುಂಚಾದಲ್ಲಿ ಹೈಕೋರ್ಟ್ ಆದೇಶ ಮೀರಿ ನಡೆಯುತ್ತಿರುವ ಪಂಚ ಬಸದಿಯ ಅಭಿವೃದ್ಧಿ ಕಾಮಗಾರಿಗೆ ತಡೆ ನೀಡುವಂತೆ ಕೋರಿ ಗ್ರಾಮಸ್ಥರು ಶನಿವಾರ ಮನವಿ ನೀಡಿದರು.

ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಜೈನರ ಪಂಚ ಬಸದಿಯ ಅಭಿವೃದ್ಧಿ ಕಾಮಗಾರಿಯು ವಾಸ್ತುಶಾಸ್ತ್ರಕ್ಕೆ ವಿರೋಧವಾಗಿದೆ ಎಂದು ಭಕ್ತರು ನೀಡಿದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿ, ಕಾಮಗಾರಿಯ ತಾತ್ಕಾಲಿಕ ತಡೆಗೆ ಆದೇಶ ನೀಡಿತ್ತು ಎಂದು ತಹಶೀಲ್ದಾರ್‌ಗೆ ನೀಡಿದ ಮನವಿಯಲ್ಲಿ ದೂರಿದ್ದಾರೆ.

ಪ್ರಾಚೀನ ಅರಮನೆಯ ಅವಶೇಷಗಳನ್ನು ಒಳಗೊಂಡ ಪಂಚ ಬಸದಿಯ ಕಾಂಪೌಂಡ್‌ನ್ನು ಅನಧಿಕೃತವಾಗಿ ತೆರವುಗೊಳಿಸಲಾಗಿದೆ. ಹೊಸದಾಗಿ ಪಂಚಬಸದಿಯ ಸುತ್ತ ಜೈನರ ವಾಸ್ತುಶಾಸ್ತ್ರಕ್ಕೆ ವಿರೋಧವಾಗಿ ಧ್ವಜಾಯದಲ್ಲಿದ್ದ ಗೋಡೆಯನ್ನು ಶ್ವಾನಾಯದಲ್ಲಿ ನಿರ್ಮಿಸುವುದಕ್ಕೆ ಹುಂಬುಜಾ ಮಠದ ಹಿಂದಿನ ಸ್ವಾಮೀಜಿ ಸಹ ವಿರೋಧ ವ್ಯಕ್ತಪಡಿಸಿದ್ದರು ಎಂಬುದು ಗ್ರಾಮಸ್ಥರ ಅಹವಾಲು.

ಕಳಪೆ ಕಾಮಗಾರಿ: ಪಂಚ ಬಸದಿಯ ಅಭಿವೃದ್ಧಿ ಕಾಮಗಾರಿಯ ಅಂದಾಜು ಪಟ್ಟಿ, ನೀಲನಕ್ಷೆ, ಮಂಜೂರಾದ ಹಣ ಕುರಿತಂತೆ ಗ್ರಾಮಸ್ಥರು ಹಾಗೂ ಜೈನರ ಮಠಕ್ಕೆ ಸೂಕ್ತ ಮಾಹಿತಿ ಇಲ್ಲ. ಮೇಲುನೋಟಕ್ಕೆ ಕಾಮಗಾರಿಯಲ್ಲಿ ಲೋಪ ಕಂಡುಬರುತ್ತಿದೆ ಎಂದು ಆಪಾದಿಸಿದರು.

ಈಗ ಜೈನ ಧರ್ಮ ವಾಸ್ತುಶಾಸ್ತ್ರ ಹಾಗೂ ಹೈಕೋರ್ಟ್ ಆದೇಶ ಮೀರಿ ನಡೆಯುತ್ತಿರುವ ಕಾಮಗಾರಿಯ ಸಹ ಕಳಪೆ ಆಗಿದೆ. ಅಕ್ಕಪಕ್ಕದಲ್ಲಿ ಇರುವ ಹಳೇ ಕಲ್ಲುಗಳನ್ನು ಕಾಂಪೌಂಡ್ ಅಡಿಪಾಯಕ್ಕೆ ಬಳಸಿಕೊಳ್ಳಲಾಗಿದೆ ಎಂಬುದು ಗ್ರಾಮಸ್ಥರಆರೋಪ.

ಹೈಕೋರ್ಟ್ ಆದೇಶದಂತೆ ಪಂಚ ಬಸದಿಗೆ ಕಾಂಪೌಂಡ್ ನಿರ್ಮಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.