ADVERTISEMENT

ತಾಕತ್ತಿದ್ದರೆ ರಾಘವೇಂದ್ರರನ್ನು ಉಚ್ಚಾಟಿಸಿ

ಬಿಜೆಪಿಗೆ ಕೆಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ಅನಂತರಾಮ್ ಸವಾಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 9:13 IST
Last Updated 2 ಏಪ್ರಿಲ್ 2013, 9:13 IST

ಶಿವಮೊಗ್ಗ: ತಾಕತ್ತಿದ್ದರೆ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಕೆಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ಅನಂತರಾಮ್ ಬಿಜೆಪಿಗೆ ಸವಾಲು ಹಾಕಿದರು.

ಬಿಜೆಪಿಗೆ ಮೊದಲು ನೈತಿಕತೆ ಇದ್ದರೆ ಇಡೀ ಸರ್ಕಾರ ರಾಜೀನಾಮೆ ನೀಡಬೇಕು. ಅದು ಬಿಟ್ಟು ರಾಘವೇಂದ್ರ ಅವರ ಉಚ್ಚಾಟನೆಗೆ ಒತ್ತಾಯಿಸುವುದು ಅಸಹ್ಯದ ಕ್ರಮ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಈಚೆಗೆ ಬಿಜೆಪಿ ಮುಖಂಡರು ಯಡಿಯೂರಪ್ಪ ವಿರುದ್ಧ ಅಸಹ್ಯವಾಗಿ ಮಾತನಾಡುತ್ತಿದ್ದಾರೆ. ಹಿಂದೆಲ್ಲಾ ಬಿಜೆಪಿಯಲ್ಲಿ ಮೂಲೆಗುಂಪಾದವರು ಇಂದು ಪ್ರಧಾನ ಭೂಮಿಕೆಗೆ ಬಂದಿದ್ದಾರೆ. ರಾಜ್ಯಸಭಾ ಆಯನೂರು ಮಂಜುನಾಥ ಅವರಿಗೆ ಡಬ್ಬಾ ಕಟ್ಟಿ ಬಿಡಲಾಗಿದೆ. ಅವರು ಹೋದಲೆಲ್ಲ ಶಬ್ಧ ಮಾಡುತ್ತಿದ್ದಾರೆ. ಡಬ್ಬಾ ಕಟ್ಟಿದವರು ಹಿಂದಿನಿಂದ ಆಯನೂರು ಅವರನ್ನು ಆಡಿಕೊಳ್ಳುತ್ತಿದ್ದಾರೆ. ಈ ಪ್ರಜ್ಞೆ ಅವರಿಗೆ ಇರಬೇಕು ಎಂದರು.

ಅಹಿಂದ ವರ್ಗಕ್ಕೆ ಯಡಿಯೂರಪ್ಪನೇ ನಾಯಕ: ಅಹಿಂದ ವರ್ಗಗಳಿಗೆ ಉತ್ತಮ ನಾಯಕತ್ವ ಯೂಡಿಯೂರಪ್ಪ ಅವರಿಂದ ಮಾತ್ರ ಸಿಗಲು ಸಾಧ್ಯ ಎಂದು ಕೆಜೆಪಿ ಅಹಿಂದ ವರ್ಗದ ಅಧ್ಯಕ್ಷ ಕೆ. ಮುಕುಡಪ್ಪ ತಿಳಿಸಿದರು.

ಕಾಂಗ್ರೆಸ್‌ನಿಂದ ಅಹಿಂದ ವರ್ಗಗಳಿಗೆ ನ್ಯಾಯ ಸಿಗಲಿಲ್ಲ ಎಂದ ಅವರು, ಈ ಬಾರಿ ಕೆಜೆಪಿಯಿಂದ ಅಹಿಂದ ವರ್ಗಗಳಿಗೆ 60 ಟಿಕೆಟ್ ಕೇಳಿದ್ದೇವೆ. ಕೊಡುವ ನಿರೀಕ್ಷೆ ಇದೆ ಎಂದರು.

ಪ್ರಬಲ ಪ್ರಾದೇಶಿಕ ಪಕ್ಷ ಎಂಬುದು ನಮ್ಮ ಬೇಡಿಕೆ. ಆ ಬೇಡಿಕೆಗಳನ್ನು ಕೆಜೆಪಿ ಈಡೇರಿಸುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಮಠಗಳಿಗೂ ಸಮಾನವಾಗಿ ಅನುದಾನ ನೀಡಿದ್ದಾರೆ. ಯಾವ ಜಾತಿಗಳಿಗೆ ತಾರತ್ಯಮ ಮಾಡಿಲ್ಲ. ಅವರ ಈ ಗುಣ ಮೆಚ್ಚಿ ನಾವು ಕೆಜೆಪಿ ಸೇರ್ಪಡೆ ಆಗಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಅಹಿಂದ ವರ್ಗದ ಉಪಾಧ್ಯಕ್ಷ ಹನುಮಂತಪ್ಪ ದೇಗಲೂರು, ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಎಸ್. ರುದ್ರೇಗೌಡ, ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಜಿ. ಬಸವಣ್ಯಪ್ಪ, ಪಕ್ಷದ ಮುಖಂಡರಾದ ಏಸುದಾಸ್, ಮಹೇಂದ್ರಪ್ಪ, ಬಿಳಕಿ ಕೃಷ್ಣಮೂರ್ತಿ, ಜಿಲ್ಲಾ ಕೆಜೆಪಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಜೆ. ಜಯಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಸುಮಿತ್ರಾ, ಪ್ರಕಾಶ್, ನಗರಸಭಾ ಸದಸ್ಯರಾದ ಐಡಿಯಲ್ ಗೋಪಿ, ಮಾಲತೇಶ್ ಉಪಸ್ಥಿತರಿದ್ದರು.

ಕಾಯಂ ಪಡಿತರ ಚೀಟಿ ಹಾಜರುಪಡಿಸಲು ಸೂಚನೆ         
ಗ್ರಾಮಾಂತರ ಪ್ರದೇಶದ ಎಲ್ಲ ಪಡಿತರ ಚೀಟಿದಾರರು ಏಪ್ರಿಲ್ ತಿಂಗಳ ಪಡಿತರ ಪಡೆಯುವಾಗ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗೆ ಕಾಯಂ ಪಡಿತರ ಚೀಟಿಯನ್ನು ಹಾಜರುಪಡಿಸುವಂತೆ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ತಿಳಿಸಿದ್ದಾರೆ.

ಕಾಯಂ ಪಡಿತರ ಚೀಟಿ ಹಾಜರುಪಡಿಸದೆ ಹಿಂದಿನ ತಾತ್ಕಾಲಿಕ ಕಾರ್ಡುಗಳನ್ನು ಹಾಜರು ಪಡಿಸುವವರಿಗೆ ಅಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.