ADVERTISEMENT

ದೂರು ಹಿಂಪಡೆಯಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 5:41 IST
Last Updated 11 ಮಾರ್ಚ್ 2014, 5:41 IST

ಭದ್ರಾವತಿ:  ರೈತ ಸಂಘದ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸುವ ಜತೆಗೆ ಪಿಎಲ್‌ಡಿ ಬ್ಯಾಂಕ್‌ ರೈತರ ಮೇಲೆ ಹೂಡಿರುವ ದಾವೆ ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ಕಾರದ ಸಾಲ ವಸೂಲಾತಿ ನೀತಿ ಖಂಡಿಸುವ ಜತೆಗೆ ಸ್ಥಳೀಯ ಪಿಎಲ್ ಡಿ ಬ್ಯಾಂಕ್ ಧೋರಣೆ ಖಂಡಿಸಿ ಮುಖ್ಯ ಬಸ್‌ ನಿಲ್ದಾಣದಿಂದ ಮೆರವಣಿಗೆ ಹೊರಟ ನೂರಾರು ರೈತರು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ತಾಲ್ಲೂಕು ಕಚೇರಿ
ತಲುಪಿದರು.

ಸಭೆಯಲ್ಲಿ ಮಾತನಾಡಿದ ಮುಖಂಡರು, ಡಿಸಿಸಿ, ಪಿಎಲ್‌ಡಿ ಮತ್ತು ಇತರ ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು. ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡಬೇಕು ಹಾಗೂ ಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಮನವಿ ಸ್ವೀಕರಿಸಲು ಸ್ಥಳಕ್ಕೆ ಬರಲು ತಡಮಾಡಿದ ತಹಶೀಲ್ದಾರ್ ಧೋರಣೆ ಖಂಡಿಸಿದ ಮುಖಂಡರು ಕಚೇರಿ ಒಳ ಆವರಣ ಪ್ರವೇಶಿಸಿ ಧರಣಿ ನಡೆಸಲು ಆರಂಭಿಸಿದರು.

ಪ್ರತಿಭಟನೆಯ ತೀವ್ರತೆ ಹೆಚ್ಚಾದ ಸಂದರ್ಭದಲ್ಲಿ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ಟಿ. ಗಂಗಾಧರಪ್ಪ, ಕೆ. ಬೆನಕಪ್ಪ, ಯಶವಂತರಾವ್ ಘೋರ್ಪಡೆ, ಜಿ. ಉಮಾಪತಿಯಪ್ಪ, ವಿರೇಶ್, ಓಂಕಾರಪ್ಪ ಸೇರಿದಂತೆ ಇತರರು ನೇತೃತ್ವ ವಹಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.