ADVERTISEMENT

ನಂಜುಂಡೇಶ್ವರ ಸ್ವಾಮಿ ವೈಭವದ ರಥೋತ್ಸವ

ಹೊಳೆಹೊನ್ನೂರು: ಕೆಂಡಾರ್ಚನೆ, ಭಕ್ತರಿಂದ ಹರಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 9:53 IST
Last Updated 25 ಏಪ್ರಿಲ್ 2013, 9:53 IST

ಹೊಳೆಹೊನ್ನೂರು: ಮಧ್ಯ ಕರ್ನಾಟಕದ ಭಕ್ತರ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧವಾಗಿರುವ ಇಲ್ಲಿನ ನಂಜುಂಡೇಶ್ವರ ಸ್ವಾಮಿಯ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಇಷ್ಟದೈವದ ರಥೋತ್ಸವದಲ್ಲಿ ಪಾಲ್ಗೊಂಡು, ವಿವಿಧ ರೀತಿಯ ಹರಕೆ ತೀರಿಸಿ, ಧನ್ಯರಾದರು.
ಬುಧವಾರ ಬೆಳಿಗ್ಗೆ ನಂಜುಂಡೇಶ್ವರ ಸ್ವಾಮಿಯ ರುದ್ರಾಭಿಷೇಕ ಮಹಾ ಮಂಗಳಾರತಿ ನಡೆಯಿತು. ನಂತರ ಬೆಳಿಗ್ಗೆ 10ಕ್ಕೆ ಕೆಂಡಾರ್ಚನೆ ನಡೆಯಿತು. ಸಂಜೆ ರಥಾರೋಹಣ ಹಾಗೂ ಬೆಳಗಿನ ಜಾವ ರಥೋತ್ಸವ ನಡೆಯಿತು.

ಸಹ್ಯಾದ್ರಿ ಪರ್ವತ ಶ್ರೇಣಿಯ ಶೃಂಗೇರಿ-ಕುದುರೆಮುಖದ ನಡುವೆ ಇರುವ ಗಂಗಾ ಮೂಲದಿಂದ ಪಶ್ಚಿಮಾಭಿಮುಖವಾಗಿ ಸುಮಾರು 56 ಪುಣ್ಯಕ್ಷೇತ್ರಗಳನ್ನು ದಾಟಿ ನಾಗತಿಬೆಳಗಲು ಮೂಲಕ ಕೂಡ್ಲಿ ಸಂಗಮದಲ್ಲಿ ತುಂಗಾನದಿಯನ್ನು ಸೇರುವ ಭದ್ರಾನದಿ `ಹರ' ಎಂದು ಪ್ರಸಿದ್ಧಿ. ಇಂತಹ ಪುಣ್ಯನದಿ ಭದ್ರಾ ದಡದ ಮೇಲೆ ನಂಜುಂಡೇಶ್ವರ ಸ್ವಾಮಿ ಉದ್ಭವ ಮೂರ್ತಿ ಇದೆ. ಹಾಗಾಗಿ, ಈ ಕ್ಷೇತ್ರದಲ್ಲಿ ದೇವರ ಪೂಜಾ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯುತ್ತವೆ.

ರಾಜ್ಯದ ನಾನಾ ಕಡೆಗಳಿಂದ ಭಕ್ತರು ಬಂದು ಸೇರುತ್ತಾರೆ. ಪ್ರತಿವರ್ಷ ಚೈತ್ರಮಾಸದ ಶುಕ್ಲಪಕ್ಷ ತ್ರಯೋದಶಿ ತಿಥೌ ಹಸ್ತ ನಕ್ಷತ್ರದಲ್ಲಿ ರಥೋತ್ಸವ ಜರುಗುತ್ತದೆ.

ನಂಜುಂಡೇಶ್ವರ ದೇವಸ್ಥಾನದ ವಿಶೇಷ ಎಂದರೆ ಯಾವುದೇ ಮನೆತನದಲ್ಲಿ ಕಷ್ಟ ಇರುವವರು ದೇವಸ್ಥಾನಕ್ಕೆ ಹರಕೆ ಮಾಡಿಕೊಂಡರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಇದೆ. ದೇವರ ಗುಗ್ಗಳ ಹೊತ್ತರೆ ಬಿಳಿ ತೊನ್ನು, ಚರ್ಮದ ಕಾಯಿಲೆಗಳು, ಕಿವಿ ಸೋರುವಿಕೆ, ಲಗ್ನ ಸುಯೋಗ, ಮಕ್ಕಳ ಫಲ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಅಲ್ಲದೇ, ದೇವಸ್ಥಾನದಲ್ಲಿಯೇ ಇದ್ದು, ಕಟ್ಟಳೆ ಮಾಡಿದರೆ ಮಾಟ- ಮಂತ್ರದಿಂದ ದೂರಾಗಬಹುದು ಎಂಬ ನಂಬಿಕೆ ಭಕ್ತರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT