ADVERTISEMENT

ನಗರದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 9:00 IST
Last Updated 20 ಅಕ್ಟೋಬರ್ 2012, 9:00 IST

ಶಿವಮೊಗ್ಗ: ಬಜೆಟ್‌ನಲ್ಲಿ ಕಾಯ್ದಿರಿಸಿದ್ದ ಗೌರವಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶಾ ಹಾಗೂ ಅಕ್ಷರ ದಾಸೋಹ ಬಿಸಿಯೂಟ ತಯಾರಕ ಕಾರ್ಯಕರ್ತೆಯರು ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.

ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತೆಯರು ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ಹಣಕಾಸು ವರ್ಷದಲ್ಲಿ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗ್ಙೆ 500ರಂತೆ ಗೌರವಧನ ಪಾವತಿಸಲು ಬಜೆಟ್‌ನಲ್ಲಿ ಕಾಯ್ದಿರಿಸಿದ್ದು, ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ತಕ್ಷಣ ಏಪ್ರಿಲ್ ತಿಂಗಳಿನಿಂದ ಸೇರಿಸಿ ಗೌರವಧನ ಪಾವತಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ, ಆಶಾ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು. ತಿಂಗಳಿಗೆ ಸರಿಯಾಗಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಮತ್ತು ಸಾರಿಗೆ ಭತ್ಯೆಯನ್ನು ಬ್ಯಾಂಕಿನ ಮೂಲಕ ನೀಡಬೇಕು ಎಂದು ಒತ್ತಾಯಿಸಿದರು.

ಅಲ್ಲದೇ, ಸರ್ಕಾರದ ಆದೇಶದಂತೆ ಉಚಿತ ಮೊಬೈಲ್ ಫೋನ್ ನೀಡಬೇಕು, ಮೆಡಿಕಲ್ ಕಿಟ್ ನೀಡಬೇಕು. ಹಾಗೆಯೇ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಮಹಿಳೆಯರನ್ನು ಹೆರಿಗೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರನ್ನು ಕಾಯಂಗೊಳಿಸಿ, ಕನಿಷ್ಠ ವೇತನ ರೂ 10 ಸಾವಿರ ನಿಗದಿಪಡಿಸಬೇಕು ಎಂದು ಬಿಸಿಯೂಟ ತಯಾರಿಕಾ ಕಾರ್ಯಕರ್ತರು ಒತ್ತಾಯಿಸಿದರು.

ನಿವೃತ್ತಿ ವೇತನ, ಇಎಸ್‌ಐ ಭವಿಷ್ಯ ನಿಧಿ ನೀಡಬೇಕು. ಹೆರಿಗೆ ಸಂದರ್ಭದಲ್ಲಿ ವೇತನಸಹಿತ ಹೆರಿಗೆ ರಜೆ ನೀಡಬೇಕು ಎಂದು ಆಗ್ರಹಿಸಿದರು.

ಸಿಐಟಿಯುನ ಶಿವಶಂಕರ್, ಸಂಘದ ಪದಾಧಿಕಾರಿಗಳಾದ ಪ್ರಮೀಳಾಬಾಯಿ, ನೆತಾಲಿಯ, ಅನಸೂಯ, ಪ್ರಭಾ, ಶೋಭಾ, ರಾಜೇಶ್ವರಿ, ರೇಷ್ಮಾ ಭಾನು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.