ADVERTISEMENT

ನಿವೇಶನಪಟ್ಟಿ ಅವಧಿ ವಿಸ್ತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 9:50 IST
Last Updated 11 ಅಕ್ಟೋಬರ್ 2011, 9:50 IST

ಶಿವಮೊಗ್ಗ: ನಿವೇಶನರಹಿತರಿಗೆ ನಿವೇಶನ ವಿತರಿಸುವ ಸಂಬಂಧ ಮನೆ ನಿವೇಶನಪಟ್ಟಿ ತಯಾರಿಸಲು ನೀಡಿರುವ ಕಾಲಾವಧಿಯನ್ನು ಆರು ತಿಂಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿ ಸೋಮವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರಿಗೆ ಮನವಿ ಸಲ್ಲಿಸಿದರು.

ನಿವೇಶನರಹಿತರಿಗೆ ನಿವೇಶನ ನೀಡಲು ಪಟ್ಟಿ ತಯಾರಿಸಲು ಆರಂಭಿಸಿರುವುದು ಉತ್ತಮ ಕಾರ್ಯ. ಆದರೆ, ನಿವೇಶನ ರಹಿತರ ಪಟ್ಟಿ ತಯಾರಿಸಲು ನೀಡಿರುವ ಕಾಲಾವಧಿ ಅತ್ಯಂತ ಕಡಿಮೆಯಾಗಿದ್ದು, ಈ ಸಮಯದಲ್ಲಿ ಎಲ್ಲಾ ನಿವೇಶನ ರಹಿತರ ಪಟ್ಟಿ ತಯಾರಿಕೆ ಅಸಾಧ್ಯ. ಈಗಾಗಲೇ ಉಪ ವಿಭಾಗಾಧಿಕಾರಿ  ಮೂರು ತಿಂಗಳಿನ ಒಳಗೆ ಪಟ್ಟಿ ತಯಾರಿಸುವಂತೆ ತಹಶೀಲ್ದಾರ್ ಹಾಗೂ ಕಾರ್ಯ ನಿರ್ವಾಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಆದರೆ, ಈ ಕುರಿತು ಯಾವುದೇ ಸ್ಥಳೀಯ ಪಂಚಾಯ್ತಿ ಅಥವಾ ಅಧಿಕಾರಿಗಳಿಗಾಗಲಿ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.

ಪಟ್ಟಿ ತಯಾರಿಕೆಗೆ ನೀಡಿರುವ ಮೂರು ತಿಂಗಳ ಕಾಲಾವಕಾಶ ಅತ್ಯಂತ ಕಡಿಮೆಯಾಗಿದ್ದು, ಈ ಸಮಯದಲ್ಲಿ ಸಮರ್ಪಕವಾಗಿ ನಿವೇಶನರಹಿತರ ಹಾಗೂ ಅನಧಿಕೃತವಾಗಿ ಗೃಹ ನಿರ್ಮಾಣ ಮಾಡಿದವರನ್ನು ಗುರುತಿಸಿ ಪಟ್ಟಿ ತಯಾರಿಕೆ ಮಾಡಲು ಸಾಧ್ಯವಿಲ್ಲ. ಅಲ್ಲದೇ, ಕಡಿಮೆ ಅವಧಿಯಲ್ಲಿ ಪಟ್ಟಿ ತಯಾರಿಕೆಯಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದರು.

ಹಾಗಾಗಿ, ಪಟ್ಟಿ ತಯಾರಿಕೆಯ ಕಾಲಾವಧಿಯನ್ನು ಆರು ತಿಂಗಳಿಗೆ ವಿಸ್ತರಿಸಿ, ನಿಜವಾದ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಯಶಸ್ಸಿಗೆ ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕರಿಯಣ್ಣ, ಪ್ರಧಾನ ಕಾರ್ಯದರ್ಶಿಗಳಾದ ತೀ.ನಾ. ಶ್ರೀನಿವಾಸ್, ರಮೇಶ್ ಹೆಗ್ಡೆ ಮುಖಂಡರಾದ ವೈ.ಎಚ್. ನಾಗರಾಜ್, ರವಿಕುಮಾರ್, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.