ಭದ್ರಾವತಿ: ಇಲ್ಲಿನ ಪಿಎಲ್‌ಡಿ ಬ್ಯಾಂಕ್ ರೈತರಿಗೆ ನೀಡುವ ಸಾಲ ಸಂಪೂರ್ಣ ಸಾಲಗಾರನಿಗೆ ಸಿಗುತ್ತಿಲ್ಲ, ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸರ್ಕಾರ ಗುಪ್ತಚರ ಇಲಾಖೆ ಮೂಲಕ ತನಿಖೆ ನಡೆಸಬೇಕು ಎಂದು ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಆಗ್ರಹಿಸಿದರು.
ಬುಧವಾರ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನಾ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಹಕಾರಿ ಕಾಯ್ದೆಯಡಿ ಡಿಕ್ರಿ ಪಡೆದಿರುವ ಈ ಬ್ಯಾಂಕ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ರೈತರನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದೆ ಎಂದು ದೂರಿದರು.
ಈ ಬ್ಯಾಂಕ್ ಹಣವಿಲ್ಲ ಎಂದು ಒಂದು ಕಡೆ ಹೇಳಿ ಮತ್ತೊಂದೆಡೆ, ಸಾಲಗಾರನನ್ನು ಜೈಲಿಗೆ ಕಳುಹಿಸಲು ರೂ.75 ದಿನಭತ್ಯೆ ತುಂಬುತ್ತಿದೆ. ಇದಕ್ಕೆ ಹೇಗೆ ಹಣ ಬರುತ್ತಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು. ತಾಲ್ಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಭ್ರಷ್ಟತೆಯಿಂದ ಕೂಡಿದೆ. ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಎಂಪಿಎಂ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕೂಡಲೇ ಹಣ ನೀಡಬೇಕು ಎಂದು ಒತ್ತಾಯ ಮಾಡಿದರು.
ಸಭೆಯಲ್ಲಿ ಮುಖಂಡರಾದ ಕಡಿದಾಳ್ ಶಾಮಣ್ಣ, ಜಯಣ್ಣ, ಕರಿಯಪ್ಪ, ರಾಮಚಂದ್ರ, ಸಿದ್ರಾಮಪ್ಪ, ಎಸ್.ಕೆ ಮಂಜುನಾಥ್, ಚಂದ್ರಪ್ಪ, ಮಲ್ಲಾರಿರಾವ್, ಈಶಣ್ಣ, ಪರಮಶಿವಪ್ಪ, ಜಿ.ವಿರೂಪಾಕ್ಷಪ್ಪ ಸೇರಿದಂತೆ ಇತರ ಮುಖಂಡರು ಮಾತನಾಡಿದರು.
ಸಭೆಗೂ ಮುನ್ನ ನೂರಾರು ರೈತರು ನಗರದ ಮುಖ್ಯ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿ ತನಕ ಮೆರವಣಿಗೆ ನಡೆಸಿ ಸರ್ಕಾರದ ಧೋರಣೆ ಖಂಡಿಸಿದರು. ಪ್ರತಿಭಟನೆಯಲ್ಲಿ ಎಎಪಿ ಪಕ್ಷದ ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.