ADVERTISEMENT

ಪ್ರಕೃತಿ ಆರಾಧನೆಯ `ಆದ್ರಿ ಮಳೆ ಹಬ್ಬ'

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 5:19 IST
Last Updated 2 ಜುಲೈ 2013, 5:19 IST
ಕಾರ್ಗಲ್ ಸಮೀಪದ ಬಿದರೂರಿನ ಪ್ರಧಾನ ಅರ್ಚಕರು ಗ್ರಾಮದೇವ ಬೀರೇಶ್ವರನಿಗೆ ಪಂಚಾಮೃತ ಅಭಿಷೇಕ ಸಲ್ಲಿಸಿ ಈಚೆಗೆ ಆದ್ರಿ ಮಳೆ ಹಬ್ಬಕ್ಕೆ ಚಾಲನೆ ನೀಡಿದರು.
ಕಾರ್ಗಲ್ ಸಮೀಪದ ಬಿದರೂರಿನ ಪ್ರಧಾನ ಅರ್ಚಕರು ಗ್ರಾಮದೇವ ಬೀರೇಶ್ವರನಿಗೆ ಪಂಚಾಮೃತ ಅಭಿಷೇಕ ಸಲ್ಲಿಸಿ ಈಚೆಗೆ ಆದ್ರಿ ಮಳೆ ಹಬ್ಬಕ್ಕೆ ಚಾಲನೆ ನೀಡಿದರು.   

ಕಾರ್ಗಲ್:  ಕಾಲ ಕಾಲಕ್ಕೆ ಮಳೆ ಬಂದು ಸಮೃದ್ಧ ಬೆಳೆ ಬೆಳೆಯುವ ನಿಟ್ಟಿನಲ್ಲಿ ಪ್ರಕೃತಿಯ ಕೊಡುಗೆ ಅನನ್ಯ. ಅಂತಹ ಪ್ರಕೃತಿಯನ್ನೇ ದೇವರು ಎಂದು ಆರಾಧಿಸುವ ವಿಶಿಷ್ಟ ಆಚರಣೆ `ಆದ್ರಿ ಮಳೆ ಹಬ್ಬ' ಇಲ್ಲಿಗೆ ಸಮೀಪದ ಬಿದರೂರು ಗ್ರಾಮಸ್ಥರು  ಆಚರಿಸಿದರು.

ಬಿದರೂರು ಗ್ರಾಮಸ್ಥರ ನಂಬಿಕೆಯಾದ ದೇವರ ಮರ ಎಂದೇ ಗುರುತಿಸಿಕೊಂಡಿರುವ ನೂರಾರು ವರ್ಷ ಹಳೆಯದಾದ ಆಲದ ಮರದಲ್ಲಿ ನೆಲೆಸಿರುವ ಗ್ರಾಮ ದೇವ ಬೀರೇಶ್ವರನಿಗೆ ಹಣ್ಣು ಕಾಯಿ ಅರ್ಪಿಸಿ, ಪಂಚಾಮೃತ ಅಭಿಷೇಕ ಸಲ್ಲಿಸುವ ಮೂಲಕ ಬಿದರೂರು ಗ್ರಾಮದ ಜನರು ಸಂಭ್ರಮದ ಜನಪದ ಹಬ್ಬಕ್ಕೆ ಚಾಲನೆ ನೀಡಿದರು.

ರೈತ ಕುಟುಂಬಗಳೇ ಜಾಸ್ತಿ ಇರುವ ಗ್ರಾಮದ ಮಕ್ಕಳು, ಮಹಿಳೆಯರು, ರೈತ ವರ್ಗದವರು ಎಂಬಂತೆ ನೂರಾರು ಜನರು ಸೇರಿಕೊಂಡು ಜಾತ್ಯತೀತವಾಗಿ ಪ್ರತಿವರ್ಷ ಆರಿದ್ರಾ ನಕ್ಷತ್ರದ ದಿನ ಪ್ರಕೃತಿಯೊಂದಿಗೆ ವರುಣ ದೇವನಿಗೆ ಪೂಜೆ ಸಲ್ಲಿಸುವ ಪರಿಪಾಠ ಇಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. `ಆರಿದ್ರಾ ಮಳೆ ಹುಯ್ಯದಿದ್ದರೆ ದಾರಿದ್ರ್ಯಾ ಖಚಿತ' ಎಂಬುದು ಹಿರಿಯರ ಮಾತು. ಆರಿದ್ರಾ ಮಳೆ ಸುರಿದರೆ ಮಾತ್ರ ರೈತರ ಬದುಕು ಹಸನಾಗುತ್ತದೆ. ಆದ ಕಾರಣ ತಲೆ ತಲಾಂತರಗಳಿಂದ ಗ್ರಾಮೀಣ ಭಾಗದ ಜನರು ಈ ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಜೈನ ಯುವಕ ಸಂಘದ ಅಧ್ಯಕ್ಷ ವಿದ್ಯಾಧರ ಜೈನ್ ತಿಳಿಸಿದರು.

ಉತ್ತಮ ಮಳೆಯಿಂದ ಒಳ್ಳೆಯ ಬೆಳೆ ಬಂದು ನಾಡಿನ ಸಕಲ ಸಂಕಷ್ಟ ನಿವಾರಣೆ ಮಾಡಲು ಗ್ರಾಮದ ದೇವರು ಬೀರೇಶ್ವರನಿಗೆ ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿ ಹೇಳಿಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.