ADVERTISEMENT

‘ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿರುವ ಇಂದಿನ ಚುನಾವಣಾ ಮನೋಭಾವ’

ಕೆ.ಎಸ್. ಪುಟ್ಟಣ್ಣಯ್ಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರೊ.ಎಂ. ಚಂದ್ರಶೇಖರಯ್ಯ ವಿಷಾದ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 9:22 IST
Last Updated 16 ಮಾರ್ಚ್ 2018, 9:22 IST

ಭದ್ರಾವತಿ: ‘ರಾಜಕಾರಣಿಗಳು ಹಾಗೂ ಪ್ರಜೆಗಳ ಇಂದಿನ ರಾಜಕೀಯ ಮನೋಭಾವ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟುಮಾಡುವ ಆತಂಕ ಸೃಷ್ಟಿಸಿದೆ’ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ಚಂದ್ರಶೇಖರಯ್ಯ ಹೇಳಿದರು.

ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ನಡೆದ ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಶ್ರದ್ಧಾಂಜಲಿ ಹಾಗೂ ಚುನಾವಣಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮತವನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚಾಗಿರುವ ಪರಿಣಾಮ ಪವಿತ್ರವಾದ ಹಕ್ಕು ಒತ್ತಡಕ್ಕೆ ಸಿಲುಕಿದೆ. ಆ ಮೂಲಕ ಉತ್ತಮರ ಆಯ್ಕೆ ಸಾಧ್ಯವಿಲ್ಲ ಎಂಬ ಮನೋಭಾವವನ್ನು ಹೆಚ್ಚಿಸಿದೆ ಎಂದು ವಿಷಾದಿಸಿದರು.

ADVERTISEMENT

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಕ್ಕನ್ನು ಮೊಟಕು ಮಾಡುವ ಪ್ರವೃತ್ತಿ ಹೆಚ್ಚಾದಾಗ ಭವಿಷ್ಯದ ಪ್ರಜಾತಂತ್ರ ವ್ಯವಸ್ಥೆಯ ಕುರಿತು ಅನೇಕ ಗೊಂದಲಗಳು ಸೃಷ್ಟಿಯಾಗುತ್ತವೆ. ಇದಕ್ಕಾಗಿ ಜಾಗೃತಿಯ ಮನಸ್ಥಿತಿಯನ್ನು ಹೆಚ್ಚು ಮಾಡುವ ಅಗತ್ಯವಿದೆ ಎಂದರು.

ರೈತ ಹೋರಾಟಗಾರ, ಹಿರಿಯ ಚಿಂತಕ, ಉತ್ತಮ ರಾಜಕಾರಣಿ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ತಾತ್ವಿಕ ನೆಲೆಗಟ್ಟಿನ ಹೋರಾಟದ ಮೂಲಕ ರಾಜಕಾರಣ ನಡೆಸಿ ಹೆಸರು ಮಾಡಿದ್ದರ ಫಲವಾಗಿ ಇಂದಿಗೂ ಪ್ರಜಾತಂತ್ರದ ಗಟ್ಟಿಗತನ ಉಳಿದಿದೆ ಎಂದು ಹೇಳಿದರು.

ಇಂತಹ ಮಹಾನ್ ನಾಯಕರ ನೆನಪುಗಳು ಚುನಾವಣೆಗಳ ಮಹತ್ವವನ್ನು ಸಾರುತ್ತವೆ. ಇಂತಹ ಗಟ್ಟಿ ನಾಯಕರ, ಚಿಂತಕರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೆ ಮಾಲೀಕರ ಸಂಘದ ಎಲ್.ವಿ. ರುದ್ರಪ್ಪ, ಸ್ವಾತಂತ್ರ್ಯ ಹೋರಾಟಗಾರ ಬಸಪ್ಪ, ಹಿರಿಯ ಕ್ರೀಡಾಪಟು ರಾಮೇಗೌಡ, ಮುನೀರ್ ಅಹಮದ್, ರೈತ ಮುಖಂಡ ವೀರೇಶ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.