ADVERTISEMENT

`ಬಿತ್ತನೆ ಬೀಜ, ರಸಗೊಬ್ಬರ ಸಕಾಲಕ್ಕೆ ಒದಗಿಸಿ'

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 11:28 IST
Last Updated 13 ಜೂನ್ 2013, 11:28 IST

ಶಿಕಾರಿಪುರ: ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಕಾಲದಲ್ಲಿ ರೈತರಿಗೆ ಒದಗಿಸುವ ಮೂಲಕ ಕೃಷಿ ಚಟುವಟಿಕೆ ಉತ್ತಮ ರೀತಿಯಲ್ಲಿ ನಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಸ್.ಹನುಮಂತಪ್ಪ ಹೇಳಿದರು.

ಪಟ್ಟಣದ ಗ್ರಾಮೀಣಾಭಿವೃದ್ಧಿ ಸೌಧ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತ ನಾಡಿದರು. ತಾಲ್ಲೂಕಿನಲ್ಲಿ ಮುಂಗಾರು ಆರಂಭ ವಾಗಿದ್ದು ರೈತರಿಗೆ ಬೇಕಾದ ಕೃಷಿ ಪರಿಕರಗಳನ್ನು ಸೂಕ್ತ ಸಮಯದಲ್ಲಿ ಸಮರ್ಪಕ ರೀತಿಯಲ್ಲಿ ವಿತರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಗೊಬ್ಬರ ಮಾರಾಟ ದರ ಏರುಪೇರಾದ ಸಂದರ್ಭದಲ್ಲಿ ವ್ಯಾಪಾರಸ್ಥರು ಕಡಿಮೆ ದರವಿದ್ದಾಗ ಶೇಖರಿಸಿಟ್ಟ ಗೊಬ್ಬರವನ್ನು, ಹೆಚ್ಚು ಬೆಲೆಗೆ ರೈತರಿಗೆ ಮಾರಾಟ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿರುವ ಕುಡಿಯುವ ನೀರಿನ ಸ್ಥಾವರಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಅಧ್ಯಕ್ಷರ ಮಾತಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಭಾಕರ್ ಪ್ರತಿಕ್ರಿಯಿಸಿ, ಪ್ರಸ್ತುತ ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಇತರ ಕೃಷಿ ಪರಿಕರಗಳನ್ನು ಸಂಗ್ರಹಿಸಿದ್ದು, ರೈತರಿಗೆ ವಿತರಿಸುತ್ತಿದ್ದೇವೆ. ರೈತರ ಕೃಷಿ ಚಟುವಟಿಕೆ ಅನುಕೂಲವಾಗುವ ನಿಟ್ಟಿನಲ್ಲಿ ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಕಾರ್ಯನಿರ್ವಾಹಕ ಅಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನಲ್ಲಿ ಡೆಂಗೆ ಜ್ವರ ಪ್ರಕರಣಗಳು ಕಂಡು ಬರುತ್ತಿದ್ದು, ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಪಂಚಾಯ್ತಿ ಅಧಿಕಾರಿಗಳು ಇತರ ಇಲಾಖೆ ಅಧಿಕಾರಿ ಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದೊಂದಿಗೆ ಪ್ರತಿ ಮನೆಗೆ ಭೇಟಿ ನೀಡಿ ಜ್ವರ ತಡೆಗಟ್ಟುವ ಮುಂಜಾಗೃತಾ ಕ್ರಮಗಳ ಬಗ್ಗೆ ಇರುವ ಕರಪತ್ರ  ತಲುಪಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗರಾಜ್ ನಾಯ್ಕ ಮಾತನಾಡಿ, ಡೆಂಗೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದು ಇತರ ಇಲಾಖೆ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸರೋಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ನಾಯ್ಕ, ಮಾಜಿ ಅಧ್ಯಕ್ಷೆ ಜ್ಯೋತಿ ರಮೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.