ADVERTISEMENT

ಮನೆ–ಮನ ಮುಳುಗಿಸುವ ‘ರಾಜಕಾಲುವೆ’

ಮಳೆಗಾಲ ಮುಗಿಯುವವರೆಗೆ ಸಂಕಟಗಳ ಸರಮಾಲೆ, ಒತ್ತುವರಿ ತೆರವಿಗೆ ಆಸಕ್ತಿ ತೋರದ ನಗರಪಾಲಿಕೆ

ಚಂದ್ರಹಾಸ ಹಿರೇಮಳಲಿ
Published 10 ಆಗಸ್ಟ್ 2016, 6:53 IST
Last Updated 10 ಆಗಸ್ಟ್ 2016, 6:53 IST
ಶಿವಮೊಗ್ಗದ ಸೂರ್ಯ ಲೇಔಟ್‌ನಲ್ಲಿ ಖಾಸಗಿ ಸಂಸ್ಥೆ ಹಳ್ಳ, ಕಾಲುವೆಗೇ ತಡೆಗೋಡೆ ನಿರ್ಮಿಸಿದೆ
ಶಿವಮೊಗ್ಗದ ಸೂರ್ಯ ಲೇಔಟ್‌ನಲ್ಲಿ ಖಾಸಗಿ ಸಂಸ್ಥೆ ಹಳ್ಳ, ಕಾಲುವೆಗೇ ತಡೆಗೋಡೆ ನಿರ್ಮಿಸಿದೆ   

ಶಿವಮೊಗ್ಗ: ಬೆಂಗಳೂರಿನಂತೆ ಶಿವಮೊಗ್ಗ ನಗರದಲ್ಲೂ ಧಾರಾಕಾರ ಮಳೆ ಸುರಿದಾಗ ಹಲವು ಬಡಾವಣೆಗಳು ಜಲಾವೃತವಾಗುತ್ತವೆ. ಇಂತಹ ಸಮಸ್ಯೆ ಹಲವು ವರ್ಷಗಳಿಂದ ಇದ್ದರೂ ರಾಜಕಾಲುವೆಗಳ ಒತ್ತುವರಿ ತೆರವಿಗೆ ನಗರ ಪಾಲಿಕೆ ಮುಂದಾಗಿಲ್ಲ.

ಬದಲಿಗೆ ಹಳ್ಳ, ಕೊಳ್ಳ, ನಾಲೆ, ಚರಂಡಿ, ರಾಜಕಾಲುವೆ ಸೇರಿದಂತೆ ನೀರಿನ ಹರಿವಿನ ಹಾದಿಗಳನ್ನೆಲ್ಲ ಒತ್ತುವರಿ ಮಾಡಿ ಮನೆ, ಕಟ್ಟಡ ಕಟ್ಟಲಾಗಿದೆ. ಹೀಗೆ ಒತ್ತುವರಿ ಮಾಡಿದವರಲ್ಲಿ ನೆಲೆ ಇಲ್ಲದ ಬಡವರು ಬೆರಳೆಣಿಕೆಯಷ್ಟು ಮಾತ್ರ. ಉಳಿದಂತೆ ಶ್ರೀಮಂತರು, ಸಂಘ ಸಂಸ್ಥೆಗಳ ಗಣ್ಯರು ಬೃಹತ್‌ ಜಾಗಗಳನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಮಾಡುತ್ತಲೂ ಇದ್ದಾರೆ.

ರಾಜಕಾಲುವೆಗಳೇ ಕಾಣದಂತೆ ಒತ್ತುವರಿ ಮಾಡಿರುವ ಮೊದಲ ಪ್ರದೇಶ ಗಾರ್ಡನ್‌ ಏರಿಯಾ. ನಂತರ ಗೋಪಾಳ, ಗಾಂಧಿ ಬಜಾರ್, ಗುಂಡಪ್ಪ ಶೆಡ್ ಮೊದಲಾದ ಭಾಗಗಳಲ್ಲಿ ಸಾಕಷ್ಟು ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ಗಾರ್ಡನ್‌ ಏರಿಯಾದಲ್ಲಿ ಕೆಲವು ತಿಂಗಳ ಹಿಂದೆ ಪಾಲಿಕೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತ್ತು.

ಕೆಲವು ಭಾಗಗಳಲ್ಲಿ ಒತ್ತುವರಿ ತೆರವಾದರೆ, ಇನ್ನು ಕೆಲವು ಭಾಗಗಳಲ್ಲಿ ಒತ್ತುವರಿ ಪ್ರದೇಶದ ಹಕ್ಕನ್ನು ಹಲವು ವರ್ಷಗಳ ಹಿಂದೆಯೇ ಪಾಲಿಕೆ ವತಿಯಿಂದ ಮಾನ್ಯ ಮಾಡಲಾಗಿದೆ.

ನಗರದ ರಾಜಕಾಲುವೆಗಳ ಜಾಲ: ಶರಾವತಿ ನಗರದ ಮೆಡಿಕಲ್‌ ಕಾಲೇಜು ಬಳಿಯಿಂದ ಸಾಗುವ ರಾಜಕಾಲುವೆ ಬಸವನಗುಡಿ, ಟ್ಯಾಂಕ್‌ಮೊಹಲ್ಲಾ, ಗುಂಡಪ್ಪ ಶೆಡ್‌ ಮೂಲಕ ಸಾಗಿ ತುಂಗಾ ನದಿ  ಸೇರುತ್ತದೆ. ಗಾಂಧಿ ಬಜಾರ್‌ನಲ್ಲಿರುವ ರಾಜಕಾಲುವೆ ಹಳೇ ಶಿವಮೊಗ್ಗ ನಗರದ ಹಲವು ಪ್ರದೇಶಗಳಲ್ಲಿ ಹರಿದು ತುಂಗಾ ನಾಲೆ ಸೇರುತ್ತದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರಾಮ ಮನೋಹರ ಲೋಹಿಯಾ ಬಡಾವಣೆ ಮೂಲಕ ಹರಿಯುವ ರಾಜಕಾಲುವೆ ತೀರ್ಥಹಳ್ಳಿ ರಸ್ತೆ ದಾಟಿ ಸವಾಯಿಪಾಳ್ಯದ ಬಳಿ ತುಂಗಾ ನದಿಯ ಒಡಲು ಸೇರುತ್ತದೆ. ಗೋಪಾಳದ ಸುತ್ತ ಮುತ್ತ ಹರಿಯುವ ರಾಜಕಾಲುವೆ ಮತ್ತೊಂದು ರಾಜಕಾಲುವೆಗೆ ಸೇರ್ಪಡೆಗೊಳ್ಳುತ್ತದೆ. ದುರ್ಗಿಗುಡಿ, ಹೊಸಮನೆ, ವಿನೋಬನಗರದ ಮೂಲಕ ಹರಿಯುವ ರಾಜಕಾಲುವೆ ಮುಂದೆ ತುಂಗಾ ನಾಲೆಯಲ್ಲಿ ವಿಲೀನವಾಗುತ್ತದೆ.

ಕೆಲವು ಭಾಗಗಳಲ್ಲಿ ರಾಜಕಾಲುವೆಗೆ ಅಡ್ಡಲಾಗಿ ಪಟ್ಟಭದ್ರರು ದೊಡ್ಡ ಕಾಂಪೌಂಡ್‌ಗಳನ್ನು ನಿರ್ಮಿಸಿ ಕೊಂಡಿದ್ದಾರೆ. ಕೆಲವು ಭಾಗಗಳಲ್ಲಿ ಎಲ್ಲ ಕಲ್ಮಶ, ಕಸಕಡ್ಡಿ, ಅನುಪಯುಕ್ತ ಸಾಮಗ್ರಿಗಳನ್ನೆಲ್ಲ ಕಾಲುವೆಗೆ ಜನರು ಹಾಕುವ ಪರಿಣಾಮ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತದೆ. ಹೆಚ್ಚು ಮಳೆ ನೀರು ಬಂದಾಗ ಮುಂದೆ ಸಾಗಲು ಸ್ಥಳವಿಲ್ಲದೆ ನೀರು ರಸ್ತೆಗಳತ್ತ ನುಗ್ಗುತ್ತದೆ. ಇತರೆ ಬಡಾವಣೆಗಳು ನೀರಿನಲ್ಲಿ ಮುಳುಗೇಳುತ್ತವೆ.

ಕೊಳಚೆ ಮೋರಿಯಾದ ತುಂಗಾ ನಾಲೆ: ತುಂಗಾ ಎಡದಂಡೆಯ ನಾಲೆ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಸಾಗುತ್ತದೆ. ಮಳೆಗಾಲದಲ್ಲಿ ಅಲ್ಪಸ್ವಲ್ಪ ನದಿ ನೀರು ಕಂಡರೂ ನಾಲೆಯಲ್ಲಿ ನೀರು ಕಡಿಮೆಯಾದರೆ ಆ ನಾಲೆ ದೊಡ್ಡ ಮೋರಿಯಾಗಿ ರೂಪಾಂತರವಾಗುತ್ತದೆ. ಅದಕ್ಕೆ ಕಾರಣ ಮನೆಗಳ ಕಲ್ಮಶ, ಶೌಚದ ನೀರು, ಸ್ನಾನದ ನೀರು ಎಲ್ಲವನ್ನೂ ಈ ಕಾಲುವೆಗೆ ಹರಿಸುವುದು

ರಾಜಕಾಲುವೆ ಇರುವುದೇ ಮಳೆಗಾಲದಲ್ಲಿ ನಗರದ ಒಳಗೆ ಬೀಳುವ ನೀರು ಸರಾಗವಾಗಿ ಹರಿದು ನದಿಯ ಒಡಲು ಸೇರಲು. ಆದರೆ, ಅದು ಇಂದು ಕಲ್ಮಶ ಹೊತ್ತು ಸಾಗುವ ರಾಜ ಮಾರ್ಗವಾಗಿದೆ.

ಸಾಂಕ್ರಾಮಿಕ ರೋಗದ ಭೀತಿ: ಒತ್ತುವರಿ ಹಾಗೂ ಕಲ್ಮಶ ಕಟ್ಟಿಕೊಳ್ಳುವ ಕಾರಣ ರಾಜಕಾಲುವೆಗಳು ಮಳೆಗಾಲದಲ್ಲಿ ತುಂಬಿ ಹರಿದು ರಸ್ತೆಗಳ ಮೇಲೆ, ತಗ್ಗು ಪ್ರದೇಶದ ಬಡಾವಣೆಗಳಿಗೆ ನುಗ್ಗುತ್ತವೆ. ನೀರು ನುಗ್ಗಿದಾಗ ಹಲವು ಮನೆಗಳು ಶಿಥಿಲಗೊಳ್ಳುತ್ತವೆ. ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗೆ ನುಗ್ಗುವಾಗ ಹಲವು ಬಡಾವಣೆಗಳ ಮನೆಗಳಿಂದ ಸೇರಿಕೊಂಡ ಕಲ್ಮಶವೂ ಬಡಾವಣೆಗಳಲ್ಲಿ ನಿಲ್ಲುವ, ಮನೆಗಳಿಗೆ ನುಗ್ಗುವ ಕಾರಣ ಸಾಂಕ್ರಾಮಿಕ ರೋಗಗಳು ಹರಡುತ್ತವೆ.  ಮಳೆಗಾಲದಲ್ಲಿ ನೀರು ನುಗ್ಗಿದರೆ
ಜನರಿಗೆ ಆರ್ಥಿಕ ನಷ್ಟವಾಗುವ ಜತೆಗೆ, ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ.

ಕಿರಿದಾದ ನಾಲೆಗಳು: ₹ 135 ಕೋಟಿ ವೆಚ್ಚದಲ್ಲಿ ತುಂಗಾ ನಾಲೆ ಆಧುನೀಕರಣ ನಡೆಯುತ್ತಿದೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಾಂಕ್ರೀಟ್‌ ಹಾಕುವಾಗ ನಾಲೆಗಳ ವಿಸ್ತಾರ ಕಡಿಮೆಯಾಗಿದೆ. ಇದು ಮಳೆಗಾಲದಲ್ಲಿ ಮತ್ತಷ್ಟು ಸಂಕಷ್ಟ ತರುವ ಸೂಚನೆ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.