ADVERTISEMENT

ಮಹಾಯೋಜನೆ-2031 ಪರಿಷ್ಕರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 5:30 IST
Last Updated 23 ಸೆಪ್ಟೆಂಬರ್ 2011, 5:30 IST

ಶಿವಮೊಗ್ಗ: ಭದ್ರಾವತಿ ಹಾಗೂ ಶಿವಮೊಗ್ಗ ಸ್ಥಳೀಯ ಯೋಜನಾ ಪ್ರದೇಶದ `ಮಹಾಯೋಜನೆ- 2031~ರ ಅನುಷ್ಠಾನದಲ್ಲಿ ಸೆಟ್‌ಬ್ಯಾಕ್ ನಿಯಮ ಸಡಿಲಿಸಿ, ಕಂದಾಯ ಹಾಗೂ ಮನೆ ನಿವೇಶನಗಳಿಗೆ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ನಗರದ ಜೆಡಿಎಸ್ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಮನೆ ಕಟ್ಟುವ ಮೊದಲೇ ಭದ್ರತಾ ಠೇವಣಿ ಇಡಬೇಕು ಹಾಗೂ ಮನೆ ಕಟ್ಟುವ ಸಂದರ್ಭದಲ್ಲಿ ಹಿಂಭಾಗದಲ್ಲಿ ಒಂದು ಮೀಟರ್ ಜಾಗ ಖಾಲಿ ಬಿಡಬೇಕೆಂಬ ಸೆಟ್‌ಬ್ಯಾಕ್ ನಿಯಮವನ್ನು ಜಾರಿಗೆ ತಂದಿರುವುದರಿಂದ ಮನೆ ನಿರ್ಮಿಸುವವರಿಗೆ ತೀವ್ರ ತೊಂದರೆಯಾಗಲಿದೆ ಎಂದು ಮುಖಂಡರು ದೂರಿದರು.

ಸಾಲ ಮಾಡಿ ಮನೆ ಕಟ್ಟಿರುತ್ತಾರೆ; ಇಂತಹ ಸಂದರ್ಭದಲ್ಲಿ ಮನೆ ಕಟ್ಟುವ ಮುಂಚೆಯೇ ಠೇವಣಿ ಇಡಬೇಕೆಂಬ ನಿಯಮವನ್ನು ಕೈಬಿಡಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದರು.ವಾಣಿಜ್ಯ ಕಟ್ಟಡಗಳ ಮಾಲೀಕರು ಪಾರ್ಕಿಂಗ್‌ಗೆ ಮೀಸಲಿಡುವ ಸೆಟ್ಟರ್‌ಗಳ ನಿಯಮಗಳನ್ನು ಉಲ್ಲಂಘಿಸುತ್ತ್ದ್ದಿದು, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಡಿಪಾಯಕ್ಕೆ ಪರವಾನಗಿ ಪಡೆದಿರುವುದರ ಬಗ್ಗೆ ನಗರಸಭೆ ಕಡ್ಡಾಯವಾಗಿ ಪರಿಶೀಲಿಸುವ ಮೂಲಕ ನಿಯಮ ಉಲ್ಲಂಘನೆ ಮಾಡುವವರನ್ನು ಗುರುತಿಸಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ವಾಸದ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಸಲು ನಿರ್ಧರಿಸಿದ್ದು, ಇದರಿಂದ ಮನೆ ಮಾಲೀಕರಿಗೆ ತೊಂದರೆಯಾಗುವುದರ ಜತೆಗೆ ನಗರಸಭೆ ಸಹ ಮೀಟರ್ ನಿರ್ವಹಣೆಗಾಗಿ ಹಣ ವ್ಯಯ ಮಾಡಬೇಕಾಗುತ್ತದೆ.

ಆದ್ದರಿಂದ ಇಂತಹ ನಿಯಮವನ್ನು ಸಡಿಲಿಸಿ, ಕೇವಲ ವಾಣಿಜ್ಯ ಉದ್ದೇಶದ ನೀರಿಗೆ ಮಾತ್ರ ಮೀಟರ್ ನಿಯಮ ಅಳವಡಿಸಬೇಕು ಎಂದು ಸಲಹೆ ಮಾಡಿದರು.

ನಗರ ಜೆಡಿಎಸ್ ಘಟಕದ ಅಧ್ಯಕ್ಷ ಎನ್.ಕೆ. ಶ್ಯಾಮಸುಂದರ್, ನಗರಸಭೆ ಮಾಜಿ ಸದಸ್ಯ ಎಚ್. ಕೃಷ್ಣ, ಸಂಘಟನಾ ಕಾರ್ಯದರ್ಶಿ ವಿ. ನಾಗರಾಜ್ ಪದಾಧಿಕಾರಿಗಳಾದ ನಾಗೇಶ್, ವಿಶ್ವೇಶ್ವರಯ್ಯ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.