ADVERTISEMENT

ಮಾರವಳ್ಳಿ: ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:15 IST
Last Updated 3 ಅಕ್ಟೋಬರ್ 2011, 6:15 IST

ಶಿಕಾರಿಪುರ: ಗ್ರಾಮದಲ್ಲಿ ಮಧ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ, ಗ್ರಾಮದ ಕೆರೆ-ಕಟ್ಟೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಯ ರಕ್ಷಣೆ ನಮ್ಮೆಲ್ಲರ ಹೊಣೆ. ಇದಕ್ಕೆ ಬದ್ಧರಾಗಿ ಇರುವುದಾಗಿ `ಪ್ರತಿಜ್ಞಾ ವಿಧಿ~ ಪಡೆಯುವ ಮೂಲಕ ತಾಲ್ಲೂಕಿನ ಮಾರವಳ್ಳಿ ಗ್ರಾಮದ ಗ್ರಾಮಸ್ಥರು ಭಾನುವಾರ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಣೆ ಮಾಡಿದರು.

ಗಾಂಧೀಜಿ ಭಾವಚಿತ್ರದೊಂದಿಗೆ ಗ್ರಾಮದ ಎಲ್ಲ ಕೇರಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಮದ್ಯ ಮಾರಾಟ ನಿಲ್ಲಿಸುವುದಕ್ಕಾಗಿ ಕೈಯಲ್ಲಿ ಪೊರಕೆ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಸ್ತ್ರೀಶಕ್ತಿ ಸಂಘಟನೆಗಳು, ರೈತಕೂಟ, ಯುವಕ, ಯುವತಿ ಸಂಘಟನೆಗಳು, ಹಿರಿಯರು, ಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾ ಸಭೆಯಲ್ಲಿ ಮೊದಲು `ಪ್ರತಿಜ್ಞಾ ವಿಧಿ~ ಸ್ವೀಕರಿಸಿ, ಮದ್ಯ ಸೇವನೆ, ಮಾರಾಟ ನಿಷೇಧ ಮಾಡುವುದನ್ನು ತಡೆಯುತ್ತೇವೆ. ಕೆರೆ-ಕಟ್ಟೆಗಳ ಒತ್ತುವರಿ ಮಾಡುವುದಿಲ್ಲ.  ಗ್ರಾಮದ ಏಳಿಗೆಗಾಗಿ ಕಂಕಣ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಗ್ರಾಮದಲ್ಲಿ ಮದ್ಯದ ಅಂಗಡಿಗಳು ಇಲ್ಲದಿದ್ದರೂ ಕಿರಾಣಿ ಅಂಗಡಿ ಸೇರಿದಂತೆ 16 ಕಡೆಗಳಲ್ಲಿ ಮಾರಾಟವಾಗುತ್ತಿದೆ. ಗ್ರಾಮದ 9 ಕೆರೆ ಒತ್ತುವರಿಯಾಗಿವೆ. ಗ್ರಾಮದ ಸಾರ್ವಜನಿಕ ಆಸ್ತಿ ದುರುಪಯೋಗ ಮಾಡಲಾಗಿದೆ. ಇದನ್ನು ತಡೆಯಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಮಾಡಿಕೊಂಡ ಮನವಿಗೆ ಸೂಕ್ತವಾಗಿ ಸ್ಪಂದಿಸದೇ ಜಿಲ್ಲಾಧಿಕಾರಿ ಕಾಣುವಂತೆ ಅಧಿಕಾರಿಗಳು ಸೂಚಿಸಿದ್ದು, ಇದರ ವಿರುದ್ಧವಾಗಿ ಗಾಂಧಿ ಜಯಂತಿ ದಿನದಂತೆ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ರೈತಕೂಟದ ವೀರೇಂದ್ರ ಪಾಟೀಲ್‌ಹೇಳಿದರು.

ಮಲ್ಲೇಶ್ವರ ಯುವಕ ಸಂಘ, ರೈತಕೂಟ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸ್ತ್ರೀಶಕ್ತಿ, ಸ್ವಸಹಾಯ ಸಂಘ ಸೇರಿದಂತೆ ಗ್ರಾಮದ ಎಲ್ಲ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 ಜನ್ಮದಿನಾಚರಣೆ
ಸೊರಬ: `ಸ್ವರಾಜ್ಯ ಎಂದರೆ ನಮ್ಮ ಕೆಲಸ ನಾವು ಮಾಡಿಕೊಂಡು ಇನ್ನೊಬ್ಬರಿಗೆ ಹೊರೆ ಆಗದಂತೆ ಬದುಕುವುದು. ಶಕ್ತಿ ಹಾಗೂ ಮನಸ್ಥಿತಿಯನ್ನು ಬಳಸಿಕೊಂಡು, ಮಹಾತ್ಮರ ಯೋಚನೆಯ ದಿಕ್ಕನ್ನಾದರೂ ನಾವು ಅನುಸರಿಸಬೇಕು~ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ರವೀಂದ್ರ ಭಟ್ ಸಲಹೆ ನೀಡಿದರು.

ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲ ಪ್ರೊ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕಿನಾದ್ಯಂತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಶಾಲಾ, ಕಾಲೇಜು, ಕಚೇರಿಗಳಲ್ಲಿ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ದಿನಚಾರಣೆ ನಡೆಸಲಾಯಿತು. ಶ್ರಮಾದಾನ, ಜಾಗೃತಿ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.

ಕಪ್ಪಗಳಲೆಯಲ್ಲಿ ವಿಶೇಷವಾಗಿ ಊರ ಮುಂದಿ ಕೆರೆಯನ್ನು ಸ್ವಚ್ಛ ಮಾಡುವ ಮೂಲಕ ಗಾಂಧಿಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.