ADVERTISEMENT

ಮೇಯರ್ ಚುನಾವಣೆ ಬೆನ್ನಲ್ಲೇ ಅಸಮಾಧಾನದ ಹೊಗೆ

ಕಾಂಗ್ರೆಸ್ ಮುಖಂಡರ ನಿರ್ಧಾರಕ್ಕೆ ಹಲವು ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 5:41 IST
Last Updated 5 ಮಾರ್ಚ್ 2018, 5:41 IST

ಶಿವಮೊಗ್ಗ: ನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆ ಕಾಂಗ್ರೆಸ್ ವಲಯದಲ್ಲಿ ಹಲವು ಪ್ರಶ್ನೆ ಹುಟ್ಟುಹಾಕಿದೆ.

ಮೊದಲ ಮೂರು ಅವಧಿ ಕಾಂಗ್ರೆಸ್ ಜೊತೆಗೂಡಿ ಅಧಿಕಾರ ಹಂಚಿಕೊಂಡಿದ್ದ ಜೆಡಿಎಸ್, ನಾಲ್ಕನೇ ಅವಧಿಗೆ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಜತೆ ಸಖ್ಯ ಬೆಳೆಸಿತ್ತು. ಆ ಮೂಲಕ ತನ್ನ ಅಭ್ಯರ್ಥಿ ಎನ್‌. ಏಳುಮಲೈ ಅವರನ್ನು ಮೇಯರ್‌ ಸ್ಥಾನದಲ್ಲಿ ಕೂರಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ನಗರ ಕ್ಷೇತ್ರದ ಶಾಸಕರು ಕಾಂಗ್ರೆಸ್‌ನವರೇ ಆಗಿದ್ದರೂ, ನಾಲ್ಕನೇ ಅವಧಿಯಲ್ಲಿ ಪಾಲಿಕೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಆ ಪಕ್ಷದ ಸದಸ್ಯರು ಬೇಸರಗೊಂಡಿದ್ದರು. ಮೂರು ಅವಧಿ ಜತೆಗಿದ್ದು, ಕೊನೆ ಗಳಿಗೆಯಲ್ಲಿ ಕೈಕೊಟ್ಟ ಜೆಡಿಎಸ್‌ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಜೆಡಿಎಸ್‌ ಸಖ್ಯ ಬೆಳೆಸುವುದು ಬೇಡ. ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ನ 13ನೇ ವಾರ್ಡ್ ಸದಸ್ಯ ಎಸ್‌. ರಾಜಶೇಖರ್ ನಾಮಪತ್ರವನ್ನೂ ಸಲ್ಲಿಸಿದ್ದರು. ಆದರೆ, ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು ಜೆಡಿಎಸ್‌ ಜತೆ ದಿಢೀರ್ ಹೊಂದಾಣಿಕೆ ಮಾಡಿಕೊಂಡಿದ್ದು, ಪಾಲಿಕೆಯ ಕಾಂಗ್ರೆಸ್ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ADVERTISEMENT

ಪಕ್ಷದ ಮುಖಂಡರ ನಡೆಯಿಂದ ಬೇಸರಗೊಂಡ ರಾಜಶೇಖರ್ ನಾಮಪತ್ರ ಹಿಂಪಡೆಯದೆ ಮೇಯರ್ ಚುನಾವಣೆಯ ಕಣದಲ್ಲಿ ಉಳಿಯುವ ಮೂಲಕ ಮೌನ ಪ್ರತಿಭಟನೆ ದಾಖಲಿಸಿದರು.

ಪಕ್ಷದ ಆಣತಿಯಂತೆ ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸಿದರೂ, ಪಕ್ಷದ ಜಿಲ್ಲಾ ಮುಖಂಡರ ದಿಢೀರ್ ನಿರ್ಧಾರದ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ ಅವಕಾಶವಾದ: ಪಾಲಿಕೆಯಲ್ಲಿ ಕೇವಲ 5 ಸದಸ್ಯರನ್ನು ಹೊಂದಿದ್ದ ಜೆಡಿಎಸ್‌ ಬಲ ಪಕ್ಷೇತರ ಅಭ್ಯರ್ಥಿ ನರಸಿಂಹಮೂರ್ತಿ ಅವರ ಸೇರ್ಪಡೆಯ ನಂತರ 6ಕ್ಕೆ ಏರಿತ್ತು. ಆ ಪಕ್ಷದ ಶಾಸಕಿ ಶಾರದಾ ಪೂರ‍್ಯಾನಾಯ್ಕ ಸೇರಿ ಪಾಲಿಕೆಯಲ್ಲಿ ಪಕ್ಷ 7 ಮತಗಳನ್ನು ಹೊಂದಿದೆ. 41 ಮತಗಳ ಬಲದ ಪಾಲಿಕೆಯಲ್ಲಿ ಕೇವಲ 7 ಮತ ಹೊಂದಿರುವ ಜೆಡಿಎಸ್ ಪ್ರತಿ ಬಾರಿಯೂ ರಾಜಕೀಯ ಚದುರಂಗದಾಟ ಆಡುತ್ತಾ 5 ಅವಧಿಯೂ ಆಡಳಿತ ಪಕ್ಷದ ಭಾಗವಾಗಿ ಅಧಿಕಾರ ಅನುಭವಿಸಿದೆ. ಎರಡು ಅವಧಿಗೆ ಮೇಯರ್ ಪಟ್ಟ, ಎರಡು ಅವಧಿಗೆ ಉಪ ಮೇಯರ್ ಗದ್ದುಗೆ ಏರಿದೆ.

ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡ 13 ಮತಗಳ ಬಲವಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಮೂರು ಬಾರಿ ಮೇಯರ್ ಸ್ಥಾನ ಉಳಿಸಿಕೊಂಡು, ಒಂದು ಅವಧಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಂಡಿತ್ತು. ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿ 15 ಮತಗಳ ಬಲ ಹೊಂದಿದ್ದರೂ ಒಂದು ಅವಧಿ ಉಪ ಮೇಯರ್ ಸ್ಥಾನ ಪಡೆದಿದ್ದನ್ನು ಬಿಟ್ಟರೆ, ಉಳಿದ ನಾಲ್ಕು ಅವಧಿ ವಿರೋಧ ಪಕ್ಷದ ಸ್ಥಾನದಲ್ಲೇ ಕುಳಿತಿದೆ. ಇಡೀ ಐದು ವರ್ಷ ಆಡಳಿತದ ಭಾಗವಾಗುವ ಮೂಲಕ ಜೆಡಿಎಸ್ ರಾಜಕೀಯ ಚಾಣಾಕ್ಷತೆ ತೋರಿದೆ.

**

ಮೌಖಿಕ ಸೂಚನೆ

ಪಾಲಿಕೆ ಮೇಯರ್ ಚುನಾವಣೆಯಲ್ಲಿ ಇಂತಹ ಅಭ್ಯರ್ಥಿಗೇ ಮತ ಚಲಾಯಿಸಬೇಕು ಎಂದು ಕಾಂಗ್ರೆಸ್ ತನ್ನ ಸದಸ್ಯರಿಗೆ ವಿಪ್ ನೀಡಿರಲಿಲ್ಲ. ಬದಲಿಗೆ ಜೆಡಿಎಸ್‌ ಅಭ್ಯರ್ಥಿಗೇ ಮತ ನೀಡುವಂತೆ ಮೌಖಿಕವಾಗಿ ಸೂಚಿಸಲಾಗಿತ್ತು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.