ADVERTISEMENT

ಮೊದಲ ಮಳೆಗೇ ಸಂತೆ ಮಾರುಕಟ್ಟೆ ಅಧ್ವಾನ

ರಿಪ್ಪನ್‌ಪೇಟೆ: ರಸ್ತೆ ಮೇಲೆ ಹರಿದ ಚರಂಡಿಯ ತ್ಯಾಜ್ಯ, ನಾಗರಿಕರಿಗೆ ಕಿರಿಕಿರಿ

ಟಿ.ರಾಮಚಂದ್ರ ರಾವ್
Published 29 ಜೂನ್ 2016, 7:36 IST
Last Updated 29 ಜೂನ್ 2016, 7:36 IST

ರಿಪ್ಪನ್‌ಪೇಟೆ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದಾಗಿ ಚರಂಡಿಯಲ್ಲಿ ತುಂಬಿದ್ದ ಕಸ ಕಡ್ಡಿಗಳ ತ್ಯಾಜ್ಯದ ನೀರು ರಸ್ತೆ ಮೇಲೆ ಹರಿದು ಸಾಕ್ಷಾತ್ ಗುಂಡಿಗಳ ದರ್ಶನವಾಯಿತು. ಶಾಲಾ ಮಕ್ಕಳು ಮಣಭಾರದ ಬ್ಯಾಗ್‌ ಹೊತ್ತು   ಸಾಗುವುದು ದುಸ್ತರವಾಗಿತ್ತು. ವಾಹನ ಸವಾರರಿಂದ ದಾರಿಹೋಕರಿಗೆ ಕೆಸರಿನ ಸಿಂಚನವಾಯಿತು.

ಅಧಿಕಾರಿಗಳ ಮಾತಿಗೆ ಕಿಮ್ಮತ್ತಿಲ್ಲ: ಜಿಲ್ಲಾ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು  15 ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ, ಚಿಕನ್‌ ಅಂಗಡಿಯ ತ್ಯಾಜ್ಯದ ನೀರು ಚರಂಡಿಯಲ್ಲಿ ನಿಂತಿರು ವುದನ್ನು ಗಮನಿಸಿದ್ದರು. ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಿ, ಮಾರುಕಟ್ಟೆಯ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಗ್ರಾಮ ಪಂಚಾಯ್ತಿಗೂ  ಸೂಚಿಸಿದ್ದರು. ಆದರೂ ಇಲಾಖೆಯ ಸೂಚನೆಯನ್ನು ಗಂಭೀರವಾಗಿ ತೆಗೆದು ಕೊಂಡಿಲ್ಲ.  ಕಾಟಚಾರಕ್ಕೆ ಕೆಲಸ ಮುಗಿಸಿ ಪಂಚಾಯ್ತಿಯವರು ಕೈತೊಳೆದು ಕೊಂಡಿದ್ದಾರೆ.

ಹಾಗಾಗಿ ಜನರು ಮೊದಲ ಮಳೆಗೆ ಕಿರಿಕಿರಿ ಅನುಭವಿಸು ವಂತಾಗಿದೆ. ಸ್ವಚ್ಛತೆ ಇಲ್ಲದ ಮಾರುಕಟ್ಟೆ ಯಲ್ಲಿ ಕೆಸರಿನ ರಾಡಿಯಿಂದ ತರಕಾರಿ ಗಳ ಬ್ಯಾಗ್‌ ಹಿಡಿದು ಹೆಣ್ಣು ಮಕ್ಕಳು ಜಾರಿ ಬೀಳುವುದು ಸಾಮಾನ್ಯವಾಗಿದೆ.

ಸಂಜೆ ಶಾಲೆಗಳು ಬಿಡುವ ವೇಳೆ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ ಪರಿಣಾಮ ಜನದಟ್ಟಣೆಯಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ಕಳೆದ 8 ವರ್ಷಗಳಿಂದ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುತ್ತಿರುವ ಈ ಸಂತೆಗೆ ಬರುವ ವ್ಯಾಪರಸ್ಥರಿಗೆ ಕುಡಿಯುವ ನೀರು, ವಿದ್ಯುತ್‌,  ಶೌಚಾಲಯ ಹಾಗೂ ರಸ್ತೆ ಸೇರಿದಂತೆ ಯಾವುದೇ ಮೂಲ ಸೌಕರ್ಯವನ್ನು ಕಲ್ಪಿಸಿಲ್ಲ. ಮೂತ್ರ ವಿಸರ್ಜಿಸಲು ಖಾಸಗಿ ವ್ಯಕ್ತಿಗಳ ಜಾಗವನ್ನು ಆಶ್ರಯಿಸುವುದು ಎಷ್ಟು ಸರಿ ಎಂದು ಶಿವಮೊಗ್ಗದ ಜಾನಕಮ್ಮ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.