ADVERTISEMENT

ರೈತರಿಗೆ ವಂಚನೆ ಆರೋಪ; ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:05 IST
Last Updated 8 ಫೆಬ್ರುವರಿ 2012, 8:05 IST
ರೈತರಿಗೆ ವಂಚನೆ ಆರೋಪ; ಮುತ್ತಿಗೆ
ರೈತರಿಗೆ ವಂಚನೆ ಆರೋಪ; ಮುತ್ತಿಗೆ   

ಸೊರಬ: ಬತ್ತ ಖರೀದಿಸಿ ತಿಂಗಳು ಕಳೆದಿದ್ದರೂ ಹಣ ಕೊಟ್ಟಿಲ್ಲ. ತೂಕದಲ್ಲಿ ವ್ಯತ್ಯಾಸ ಮಾಡಲಾಗಿದೆ. ದಲಾಲರಿಂದ ದುಡ್ಡು ತಿಂದು ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಬತ್ತದ ಬೆಂಬಲ ಬೆಲೆ ಖರೀದಿ ಕೇಂದ್ರದ ವಿರುದ್ಧ ಆರೋಪಿಸಿದ ಮಲ್ಲಾಪುರ, ದ್ವಾರಹಳ್ಳಿ ರೈತರು, ಕೇಂದ್ರದ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ಆನವಟ್ಟಿಯಲ್ಲಿ ನಡೆಯಿತು.

ಗ್ರಾಮದ ಎಪಿಎಂಸಿ ಆವರಣದಲ್ಲಿ ಜ. 4ರಿಂದ ಖರೀದಿ ಆರಂಭಿಸಿದ್ದು, ಈವರೆಗೆ ಯಾವುದೇ ರೈತರಿಗೆ ಚೆಕ್ ನೀಡಿಲ್ಲ.

ಖರೀದಿ ಕೇಂದ್ರದಲ್ಲಿ ತೂಕ ಮಾಡುವ ವ್ಯವಸ್ಥೆ ಇಲ್ಲದೇ ರೈತರೇ ತೂಕ ಮಾಡಿ ತರುವಂತೆ ಸೂಚಿಸಿದ್ದು, ಮಂಡಳಿಗೆ ಕಳುಹಿಸಿದ ನಂತರ ಪುನಃ ತೂಕ ಮಾಡಿ ಚೀಲಕ್ಕೆ 2-3 ಕಿಲೋ ಕಮ್ಮಿ ಪ್ರಮಾಣ ತೋರಿಸಲಾಗುತ್ತಿದೆ. ಇದು ಅವೈಜ್ಞಾನಿಕ ಕ್ರಮ ಆಗಿದೆ. ಕನಿಷ್ಠ 2ರಿಂದ 9 ಚೀಲದವರೆಗೆ ಕಮ್ಮಿ ಬಂದಿದೆ.

ಖಾಸಗಿ ವ್ಯಾಪಾರಸ್ಥರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಕಳಪೆ ಗುಣಮಟ್ಟದ ಬತ್ತವನ್ನು ಅಕ್ರಮವಾಗಿ ಸೇರಿಸಿ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಕಚೇರಿಯನ್ನು ಸ್ಥಗಿತಗೊಳಿಸಿ, ಮೇಲಧಿಕಾರಿಗಳು ಆಗಮಿಸಿ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಲಿ. ಕೇಂದ್ರದಲ್ಲಿ ರೈತರ ಎದುರೇ ತೂಕ ಮಾಡುವ ವ್ಯವಸ್ಥೆ ಕಲ್ಪಿಸಲಿ  ಎಂದು ಆಗ್ರಹಿಸಿದರು.

ಈ ಕುರಿತು ಮೇಲಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ಥಳೀಯ ಅಧಿಕಾರಿಗಳು ದಿನವಹಿ ವರದಿ, ವಿವರಗಳನ್ನು ಸರಿಯಾದ ಸಮಯಕ್ಕೆ ಕಳುಹಿಸಿಲ್ಲ ಎಂದು ತಿಳಿಸಿದರು.

ಸ್ಥಳದಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಜ. 18ರವರೆಗೆ ಬಿಲ್ ಹಾಕದೇ ಇರುವ ಸಂಗತಿ ಬೆಳಕಿಗೆ ಬಂದಿತು. ಈವರೆಗೆ ಒಟ್ಟು 86 ಲೋಡ್ ಬತ್ತವನ್ನು ಕೇಂದ್ರದಿಂದ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಯಾವುದೇ ರೈತರಿಗೆ ಚೆಕ್ ನೀಡಿಲ್ಲ. ಸಂದಾಯ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಪಾವತಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ರೈತರಿಗೆ ಅನ್ಯಾಯ ಆಗದಂತೆ ನಡೆದುಕೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದ ನಂತರ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಜಿ.ಪಂ. ಸದಸ್ಯೆ ಗೀತಾ ಬಿ. ಮಲ್ಲಿಕಾರ್ಜುನ ಕೇಂದ್ರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಬಸವಂತಪ್ಪ ಮಲ್ಲಾಪುರ, ಬಿ. ಮಲ್ಲಿಕಾರ್ಜುನ, ರುದ್ರಗೌಡ ಸಿ. ಪಾಟೀಲ್, ಉಜ್ಜಪ್ಪ, ಇ. ಬಸವರಾಜ್ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.