ADVERTISEMENT

ಲೇಖಕರೊಂದಿಗೆ ದೂರವಾಣಿಯಲ್ಲಿ ಸಂವಾದ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 10:30 IST
Last Updated 1 ಫೆಬ್ರುವರಿ 2012, 10:30 IST

ಸಾಗರ: `ಎಲ್ಲಾ ಧರ್ಮಗಳ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದ್ದು, ಶೋಷಿತ ಮಹಿಳೆಯರು ಒಟ್ಟಾಗಿ ಇದರ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದು ಲೇಖಕಿ ಸಾರಾ ಅಬೂಬುಕರ್ ಹೇಳಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಪರಸ್ಪರ ಸಾಹಿತ್ಯ ವೇದಿಕೆ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ `ಲೇಖಕರೊಂದಿಗೆ ದೂರವಾಣಿ ಸಂವಾದ~ ಕಾರ್ಯಕ್ರಮದಲ್ಲಿ ಸ್ತ್ರೀಶೋಷಣೆ ಕುರಿತು ಜಯಂತಿ ಎಂಬ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಧಾರ್ಮಿಕ ನಿಯಮಗಳಿಗಿಂತ ಪ್ರಕೃತಿ ಸಹಜನಿಯಮಗಳು ಮನುಷ್ಯನಿಗೆ ದೊಡ್ಡದು. ಅದನ್ನು ಮೀರಿ ನಡೆದರೆ ಅನಾಹುತಕ್ಕೆ ದಾರಿಯಾಗುತ್ತದೆ ಎಂಬ ನಿಲುವನ್ನು ಇಟ್ಟುಕೊಂಡು ಬರೆದದ್ದು, `ನಿಯಮ ನಿಯಮಗಳ ನಡುವೆ~ ಕೃತಿ ಎಂದು ಸುಪ್ರಿಯಾ ಎಂಬ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಅವರು ವಿವರಿಸಿದರು.

ಸೌಂದರ್ಯ ಎಂಬ ವಿದ್ಯಾರ್ಥಿನಿ ನೀವಿರುವುದು ಕಾಸರಗೋಡಿನಲ್ಲಿ, ನಿಮ್ಮ ಮನೆ ಮಾತು ಮಲೆಯಾಳಿ. ಆದಾಗ್ಯೂ ಕನ್ನಡದಲ್ಲಿ ಬರೆಯಲು ಸಾಧ್ಯವಾದದ್ದು ಹೇಗೆ ಎಂದು ಕೇಳಿದ ಪ್ರಶ್ನೆಗೆ, 1956ಕ್ಕೂ ಮೊದಲು ಕಾಸರಗೋಡು ಕರ್ನಾಟಕದಲ್ಲೇ ಇತ್ತಲ್ಲವೇ ಎಂಬುದನ್ನು ನೆನಪಿಸಿದ ಸಾರಾ, ಕನ್ನಡ ಶಾಲೆಯಲ್ಲಿ ಓದಿದ ಕಾರಣಕ್ಕೆ ಕನ್ನಡದಲ್ಲಿ ಬರೆಯಲು ಸಾಧ್ಯವಾಯಿತು ಎಂದು ಉತ್ತರಿಸಿದರು.

ಕವಯತ್ರಿ ಸವಿತಾ ನಾಗಭೂಷಣ್ ಅವರಿಗೆ ವಿದ್ಯಾರ್ಥಿನಿ ಅನುಷಾ ಸ್ತ್ರೀ ಈ ಪುರುಷ  ಪ್ರಧಾನ ಸಮಾಜವನ್ನು ಎದುರಿಸುವುದು ಹೇಗೆ ಎಂದು ಪ್ರಶ್ನಿಸಿದರು. ಮಹಿಳೆ ತನ್ನ ಬಗ್ಗೆ ಆತ್ಮವಿಶ್ವಾಸ ಗಳಿಸಿಕೊಳ್ಳುವುದು ಮುಖ್ಯ. ನಂತರ, ನಾನು ಸಂಕಟಕ್ಕೆ ಈಡಾಗುವುದಿಲ್ಲ ಮತ್ತು ಪೋಷಕರನ್ನು ಸಂಕಟಕ್ಕೆ ಈಡು ಮಾಡುವುದಿಲ್ಲ ಎಂದು ಹೆತ್ತವರಲ್ಲಿ ನಂಬಿಕೆ ಹುಟ್ಟುವಂತೆ ವಿಶ್ವಾಸ ಮೂಡಿಸಿದರೆ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಉತ್ತರಿಸಿದರು.


ಲಕ್ಕುರಾಮ ಎಂಬ ವಿದ್ಯಾರ್ಥಿ ಬರವಣಿಗೆಯಲ್ಲಿ ನಾವು ತೊಡಗಿಸಿಕೊಳ್ಳುವುದು ಹೇಗೆ ಎಂದು ಕೇಳಿದ್ದಕ್ಕೆ, ಅರ್ಚಕರು ಪ್ರತಿದಿನ ದೇವರನ್ನು ನೋಡುವ ಮಹದಾಸೆಯಿಂದ ಹೇಗೆ ದೇವಸ್ಥಾನಕ್ಕೆ ಹೋಗುತ್ತಾರೋ ಅದೇ ರೀತಿಯ ಮಹತ್ವಾಕಾಂಕ್ಷೆ ಬರವಣಿಗೆ ಬಗ್ಗೆ ಇದ್ದರೆ ಮಾತ್ರ ಬರೆಯಲು ಸಾಧ್ಯ. ನಮ್ಮ ಸುತ್ತ ನಡೆಯುವ ಪ್ರತಿಯೊಂದು ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಸು ನಮಗೆ ಇರಬೇಕು ಎಂದು ಸವಿತಾ ನಾಗಭೂಷಣ್ ಉತ್ತರಿಸಿದರು.

ನಿಮ್ಮ `ತಂಗಿ ಹುಟ್ಟಿದಳು~ ಕವಿತೆಯಲ್ಲಿ ಇರುವ ಸ್ತ್ರೀಶೋಷಣೆಯ ಸ್ಥಿತಿ ಈಗಲೂ ಇದೆಯಾ ಎಂದು ಚೈತ್ರಾ ಕೇಳಿದ ಪ್ರಶ್ನೆಗೆ, ಗಾಂಧೀಜಿ ಹೇಳಿದಂತೆ ಎಲ್ಲಿಯವರೆಗೆ ಮಹಿಳೆ ರಾತ್ರಿ 12ರಲ್ಲೂ ನಿರ್ಭಯವಾಗಿ ಒಬ್ಬಳೇ ತನ್ನ ಮನೆಗೆ ಬರಲು ಸಾಧ್ಯವಿಲ್ಲವೋ ಅಲ್ಲಿಯವರೆಗೂ ಶೋಷಣೆ ಇನ್ನೂ ಇದೆ ಎಂದೇ ಭಾವಿಸಬೇಕು ಎಂದು ಉತ್ತರಿಸಿದರು.
ಕವಿ ಸಿದ್ದಲಿಂಗಯ್ಯ ಅವರಿಗೆ ವಿದ್ಯಾರ್ಥಿನಿ ಸುನಿತಾ ನಿಮ್ಮನ್ನು ದಲಿತ, ಬಂಡಾಯ ಲೇಖಕ ಎಂದು ಕರೆಯುವುದನ್ನು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನೆ ಕೇಳಿದರು.

ಅಭಿಮಾನದಿಂದ ದಲಿತ ಕವಿ ಎಂದು ಯಾರಾದರೂ ಕರೆದರೆ ಅದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ, ಕವಿ ಎಂದರೆ ಸಾಕು. ಕನ್ನಡದ ಕವಿ ಎಂದರೂ ಅಡ್ಡಿಯಿಲ್ಲ. ದಲಿತ, ಬಂಡಾಯ ಎನ್ನುವುದೆಲ್ಲಾ ಕೇವಲ ಅಧ್ಯಯನದ ಉದ್ದೇಶಕ್ಕೆ ಮಾಡಿಕೊಂಡಿರುವ ವರ್ಗೀಕರಣವಷ್ಟೇ ಎಂದು ಸಿದ್ದಲಿಂಗಯ್ಯ ಹೇಳಿದರು.

ದಲಿತರ ಬಗ್ಗೆ ನಿಮ್ಮಲ್ಲಿ ಇರುವ ಮನೋಭಾವ ಯಾವುದು ಎಂದು ವಿದ್ಯಾರ್ಥಿ ಕಿರಣ್ ಕೇಳಿದ್ದಕ್ಕೆ, ನನ್ನ ದೃಷ್ಟಿಯಲ್ಲಿ ಶೋಷಣೆಗೆ ಒಳಗಾದ ಎಲ್ಲಾ ಜಾತಿ ಹಾಗೂ ಧರ್ಮದಲ್ಲಿರುವ ಬಡವರು, ದಲಿತರು. ಅದರಲ್ಲೂ ಅಸ್ಪೃಶ್ಯರ ಮೇಲೆ ನಡೆಯುವ ಶೋಷಣೆ ಅಗಾಧವಾದದ್ದು. ಈ ಎಲ್ಲಾ ದಲಿತರು ಒಟ್ಟಾಗಿ ಶೋಷಣೆಯನ್ನು ಬಡಿದೋಡಿಸಬೇಕಿದೆ ಎಂದು ಸಿದ್ದಲಿಂಗಯ್ಯ ಉತ್ತರಿಸಿದರು.

ಆರಂಭದಲ್ಲಿ ಸಾಹಿತಿ ಡಾ.ನಾ. ಡಿಸೋಜ ಸಿದ್ದಲಿಂಗಯ್ಯ ಅವರಿಗೆ ಪ್ರಶ್ನೆ ಕೇಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಟಿ.ಆರ್. ಆಶಾ ಹಾಜರಿದ್ದರು. ಪರಸ್ಪರ ಸಾಹಿತ್ಯ ವೇದಿಕೆಯ ಡಾ.ಸರ್ಫ್ರಾಜ್ ಚಂದ್ರಗುತ್ತಿ ಕಾರ್ಯಕ್ರಮ ನಿರ್ವಹಿಸಿದರು.

4ರಿಂದ ಸ್ಮರಣೆ

ಇಲ್ಲಿನ ಉದಯ ಕಲಾವಿದರು ರಂಗ ಸಂಸ್ಥೆ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶ್ರೀರಂಗರ ದತ್ತಿನಿಧಿಯ ಸಹಯೋಗದೊಂದಿಗೆ ಫೆ. 4, 5ರಂದು ಸೇವಾ ಸಾಗರ ಶಾಲೆಯ ಅಜಿತ್ ಸಭಾಭವನದಲ್ಲಿ ಶ್ರೀರಂಗರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈಚೆಗೆ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಬಿ.ಆರ್. ವಿಜಯ ವಾಮನ್, 4ರಂದು ಬೆಳಿಗ್ಗೆ 10.30ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶ್ರೀರಂಗ ದತ್ತಿನಿಧಿಯ ಸಂಚಾಲಕ ಡಾ.ಅಶೋಕಕುಮಾರ ರಂಜೇರೆ ಆಶಯ ಭಾಷಣ ಮಾಡಲಿದ್ದಾರೆ ಎಂದರು.

4ರಂದು ಮಧ್ಯಾಹ್ನ 12.15ಕ್ಕೆ ನಡೆಯಲಿರುವ ಗೋಷ್ಠಿಯಲ್ಲಿ `ಶ್ರೀರಂಗರ ಜೀವನ ಮತ್ತು ಸಾಧನೆ~ ಕುರಿತು ಮೈಸೂರಿನ ರಂಗಾಯಣದ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಮಧ್ಯಾಹ್ನ 2.30ರ ಗೋಷ್ಠಿಯಲ್ಲಿ `ವಾಸ್ತವವಾದಿ ರಂಗಭೂಮಿಗೆ ಶ್ರೀರಂಗರ ಕೊಡುಗೆ~ ಕುರಿತು ಭಾಷಾತಜ್ಞ ಡಾ.ಮಲ್ಲಿಕಾರ್ಜುನ ಮೇಟಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

5ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಗೋಷ್ಠಿಯಲ್ಲಿ `ಶ್ರೀರಂಗರ ನಾಟಕಗಳ ಪ್ರದರ್ಶನ ಸಾಧ್ಯತೆಗಳು ಮತ್ತು ಸವಾಲುಗಳು~ ಕುರಿತು ರಂಗತಜ್ಞ ಸಿ. ಬಸವಲಿಂಗಯ್ಯ, 12.30ರ ಗೋಷ್ಠಿಯಲ್ಲಿ `ಶ್ರೀರಂಗರ ರಂಗ ಚಿಂತನೆಗಳು~ ಕುರಿತು ರಂಗಕರ್ಮಿ ಎಸ್. ಮಾಲತಿ, ಮಧ್ಯಾಹ್ನ 2.30ರ ಗೋಷ್ಠಿಯಲ್ಲಿ `ಶ್ರೀರಂಗರ ನಾಟಕೇತರ ಸಾಹಿತ್ಯ~ ಕುರಿತು ಡಾ.ಆರ್. ಚಲಪತಿ ಉಪನ್ಯಾಸ ನೀಡಲಿದ್ದಾರೆ ಎಂದರು.

ಸಂಜೆ 6ಕ್ಕೆ ಸಮಾರೋಪ ನಡೆಯಲಿದ್ದು, ಸಾಹಿತಿ ಡಾ.ನಾ. ಡಿಸೋಜ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ರಂಗಕರ್ಮಿ ಕಾಗೋಡು ಅಣ್ಣಪ್ಪ ಪಾಲ್ಗೊಳ್ಳುವರು. ಸಂಜೆ 7ಕ್ಕೆ `ಶೋಕ ಚಕ್ರ~ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.ಉದಯ ಕಲಾವಿದರು ಸಂಸ್ಥೆಯ ಡಾ.ಗುರುರಾವ್ ಬಾಪಟ್, ಡಾ.ಟಿ.ಎಸ್. ರಾಘವೇಂದ್ರ,ಸಿ.ಜಿ. ಶ್ರೀಧರ, ಮೃತ್ಯುಂಜಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.