ADVERTISEMENT

ಲೋಕಸತ್ತಾ ಪಕ್ಷದ ಅಭ್ಯರ್ಥಿಗಾಗಿ ‘ದೊಂಬರಾಟ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ರಿಪ್ಪನ್‌ಪೇಟೆ: ಲೋಕಸಭಾ ಚುನಾವಣೆ ಕಾವು ಬಂತೆಂದರೆ  ಸಾಕು ಸಾರ್ವಜನಿಕರಲ್ಲಿ ಎಲ್ಲಿಲ್ಲದ ಉತ್ಸಾಹ, ಹಳ್ಳಿ–ಹಳ್ಳಿಗಳಲ್ಲಿಯೂ ಗರಿಗೆದರುವ ರಾಜಕೀಯ. ಬೇಸಿಗೆಯ ಧಗೆಯನ್ನು ಮೀರಿಸುವ ವಿವಿಧ ಪಕ್ಷಗಳ ಚುನಾವಣೆ ಭರಾಟೆ, ಕೂಲಿ ಕಾರ್ಮಿಕರ ಓಲೈಕೆಗೆ ಹಣದ ಥೈಲಿಗಳ ಚೆಲ್ಲಾಟ.

ಆದರೆ ಪಟ್ಟಣದ ವಿನಾಯಕ ವೃತ್ತದಲ್ಲಿ ಗುರುವಾರ ಸಂಜೆ ದೊಂಬರಾಟದ ತಂಡದ 8ರ ಬಾಲೆಯೊಬ್ಬಳು  ನಡೆಸಿದ ಪ್ರದರ್ಶನಕ್ಕೆ ನೆರೆದಿದ್ದ ಜನ ತಮ್ಮ ಕೈಲಾದ ಸಹಾಯ ಹಸ್ತ ಚಾಚಿದರು.  ಕೇವಲ 20 ನಿಮಿಷದ ಈ ದೊಂಬರಾಟದಲ್ಲಿ ಸಂಗ್ರಹಣೆಯಾದ ಮೊತ್ತ ₨ 1,830. ಕಳೆದ ಬಾರಿ ಲೋಕಸತ್ತಾ ಪಕ್ಷದಿಂದ ಸಾಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಜನಪರ ಹೋರಾಟಗಾರ ಟಿ.ಆರ್‌.ಕೃಷ್ಣಪ್ಪ ಅವರೇ ಇದರ ರೂವಾರಿ. 

ಹಾಲಿ ಲೋಕಸಭಾ ಚುನಾವಣೆಗೆ ಲೋಕಸತ್ತಾ ಪಕ್ಷದಿಂದ ಶಿವಮೊಗ್ಗ ಜಿಲ್ಲೆಯ  ಸೂಕ್ತ ಅಭ್ಯರ್ಥಿಯ ಹುಡುಕಾಟ ಹಾಗೂ ಠೇವಣಿ ಸಂಗ್ರಹಣೆಗಾಗಿ ಈ ಮಾರ್ಗವನ್ನು ಆಯ್ದುಕೊಂಡಿದ್ದಾರೆ.

ಪಾರದರ್ಶಕ ಆಡಳಿತಕ್ಕಾಗಿ ಜನರಿಂದಲೇ ನಾಯಕನ ಆಯ್ಕೆಗಾಗಿ ಲೋಕಸತ್ತಾ ಪಕ್ಷ ಬೆಂಬಲಿಸಲಿ ಎನ್ನುವುದು ಇವರ ಇಂಗಿತ.
ಚುನಾವಣೆ ಸಂದರ್ಭದಲ್ಲಿ ಹುಡುಗಿಯನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ  ಅಭಿಪ್ರಾಯ.

ಪ್ರಚಾರ ಕಾರ್ಯದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್‌, ಬೆಂಗಳೂರಿನ ರವಿಕುಮಾರ್‌ ಮುಖಂಡರಾದ ಬಂಗಾರಿ ಮಂಜಪ್ಪ, ಹಸನಬ್ಬ, ಅಬ್ದುಲ್‌ ಮುತಾಲಿಫ್‌ ಮತ್ತು ಜಯರಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.