ADVERTISEMENT

ವಿಧಾನಸಭೆ ವಿಸರ್ಜನೆಗೆ ಕಾಗೋಡು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 7:30 IST
Last Updated 1 ಜುಲೈ 2012, 7:30 IST

ಸಾಗರ: ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇರುವ ಸನ್ನಿವೇಶದಲ್ಲಿ ಮಂತ್ರಿಗಳು ರಾಜೀನಾಮೆ ನೀಡಿ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಒಳ್ಳೆಯದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿಯನ್ನು ಎದುರಿಸುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲವಾಗಿದೆ. ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಧಿಕಾರಿಗಳಿಗೆ ಜನಪ್ರತಿಧಿನಿ ಗಳಬಗ್ಗೆ ಭಯವೇ ಇಲ್ಲದಂತಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆ ಕುಸಿತ ಕಂಡಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕೂಡ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಈ ತಾಲ್ಲೂಕಿನ ಎಣ್ಣೆಹೊಳೆ ಸೇತುವೆ ನಿರ್ಮಾಣ ಕಾಮಗಾರಿ ವಿಳಂಬ, ನನೆಗುದಿಗೆ ಬಿದ್ದಿರುವ ಸಂಗಳ ಗ್ರಾಮದಲ್ಲಿನ ತ್ಯಾಜ್ಯ ವಿಲೇವಾರಿ ಘಟಕ ಇವುಗಳನ್ನೆಲ್ಲಾ ನೋಡಿದರೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಅಭಿವೃದ್ಧಿಯ ಬಗ್ಗೆ ಶ್ರದ್ಧೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ತುಮರಿ ಸೇತುವೆ ನಿರ್ಮಾಣ, ಶರಾವತಿ ಹಿನ್ನೀರಿನಿಂದ ಸಾಗರ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ, ಸಾಗರ ನಗರದ ಒಳಚರಂಡಿ ನಿರ್ಮಾಣ ಯೋಜನೆ ಇವುಗಳ ಬಗ್ಗೆ ದೀರ್ಘಕಾಲದಿಂದ ಕೆಲಸ ಆರಂಭಿಸುವುದಾಗಿ ಶಾಸಕರು ಹೇಳುತ್ತಿದ್ದರೂ ಎಲ್ಲಾ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಟೀಕಿಸಿದರು.

ಹೊಳಿಯಪ್ಪ, ಮಕ್ಬುಲ್ ಅಹಮದ್, ತೀ.ನಾ. ಶ್ರೀನಿವಾಸ್, ಮಹಮದ್ ಖಾಸಿಂ, ಮಲ್ಲಿಕಾರ್ಜುನ ಹಕ್ರೆ, ಐ.ಎನ್. ಸುರೇಶ್‌ಬಾಬು, ಸುಂದರ್‌ಸಿಂಗ್, ತಾರಾ ಮೂರ್ತಿ, ಡಿ. ದಿನೇಶ್, ಕರುಣಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.