ADVERTISEMENT

ವೈದ್ಯರಿಗೆ ಕಾಯುವುದೇ ಮಹಿಳೆಯರ ಕಾಯಕ

ಶಿಕಾರಿಪುರ: ಈ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರು!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:29 IST
Last Updated 6 ಡಿಸೆಂಬರ್ 2012, 6:29 IST

ಶಿಕಾರಿಪುರ: ಹೆರಿಗೆ ಹಾಗೂ ಪ್ರಸೂತಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಲು ರೋಗಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದಿನಗಟ್ಟಲೆ ಆಸ್ಪತ್ರೆಯಲ್ಲಿ ಕಾಯುವ ಪರಿಸ್ಥಿತಿ ಜಿಲ್ಲಾಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದೆ.

ಆಸ್ಪತ್ರೆಯಲ್ಲಿ ಬುಧವಾರ ರೋಗಿಗಳು ತಮ್ಮ ಎಲ್ಲಾ ಚಟುವಟಕೆ ಗಳನ್ನು ಬಿಟ್ಟು ಬೆಳಿಗ್ಗೆಯಿಂದ ಚಿಕಿತ್ಸೆಗಾಗಿ ತಮ್ಮ ಪುಟ್ಟ-ಪುಟ್ಟ ಮಕ್ಕಳೊಂದಿಗೆ ಸಂಜೆವರೆಗೂ ವೈದ್ಯರನ್ನು ಕಾಯುವ ದೃಶ್ಯ ಕಂಡು ಬಂತು. ಕೆಲವರು ಒಂದು ದಿನ ತಮ್ಮ ಸರದಿ ಬರದಿದ್ದರೆ ಮರು ದಿನ ಆಗಮಿಸಿ ಚಿಕಿತ್ಸೆ ಪಡೆದ ಉದಾಹರಣೆಗಳನ್ನು ಕೂಡ ಹೇಳಿದರು.

ಮನೆಯ ಕೆಲಸ ಕಾರ್ಯಗಳನ್ನು ಬಿಟ್ಟು ಬೆಳಿಗ್ಗೆ 8ಕ್ಕೆ ಆಗಮಿಸಿದ್ದು, ಉಪಹಾರ ಸಹ ಸೇವಿಸದೆ ವೈದ್ಯರಿಗಾಗಿ ಕಾಯುವಂತಾಗಿದೆ. ಇಲ್ಲಿರುವ ಒಬ್ಬ ವೈದ್ಯರು ಕೂಡ ಒಳ ರೋಗಿಗಳಿಗೆ ಚಿಕಿತ್ಸೆ ನೀಡಲು ತೆರಳಿದ್ದಾರೆ ಎಂದು ಮಹಿಳಾ ರೋಗಿಯೊಬ್ಬರು `ಪ್ರಜಾವಾಣಿ'ಯೊಂದಿಗೆ ತಮ್ಮ ಕಷ್ಟ ಹಂಚಿಕೊಂಡರು.

ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗರಾಜ್‌ನಾಯ್ಕ ಮಾತನಾಡಿ, ಈ ಆಸ್ಪತ್ರೆ ಜಿಲ್ಲಾಮಟ್ಟದ ಆಸ್ಪತ್ರೆಯಾಗಿರುವುದರಿಂದ ಸೊರಬ, ಹೊನ್ನಾಳಿ, ಹಿರೇಕೆರೂರು ತಾಲ್ಲೂಕುಗಳಿಂದ ಹೆಚ್ಚಿನ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವುದರಿಂದ ಈ ರೀತಿ ತೊಂದರೆ ಉಂಟಾಗಿದೆ.

ನಮ್ಮಲ್ಲಿ ಮೊದಲು 3 ಜನ ಹೆರಿಗೆ ಹಾಗೂ ಪ್ರಸೂತಿ ತಜ್ಞ ವೈದ್ಯರಿದ್ದರು. ಆದರೆ, ಅವರಲ್ಲಿ ಒಬ್ಬರು ವರ್ಗಾವಣೆ ಆಗಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸರಿ ಪಡಿಸುತ್ತೇವೆ ಎಂದರು.

ಇದಲ್ಲದೆ ಆಸ್ಪತ್ರೆ ಆವರಣದಲ್ಲಿ ಹಂದಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ಹಂದಿಗಳ ಮಧ್ಯದಲ್ಲಿಯೇ ಕುಳಿತು ರೋಗಿಗಳ ಸಂಬಂಧಿಕರು ಊಟ ಸೇವಿಸುತ್ತಿರುವ ದೃಶ್ಯ ಕಾಣಸಿಗುತ್ತದೆ. ಅವರು ಸ್ವಲ್ಪ ಬೇರೆ ಕಡೆ ಗಮನ ಹರಿಸಿದರೆ ತಾವು ತಂದ ಊಟ ಹಂದಿಗಳ ಪಾಲಾಗುವುದು ನಿಶ್ಚಿತ.

ಒಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರವಧಿಯಲ್ಲಿ ಈ ಆಸ್ಪತ್ರೆಯನ್ನು ಜಿಲ್ಲಾಮಟ್ಟದ ಆಸ್ಪತ್ರೆ ಮಾಡಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.