ADVERTISEMENT

ಸಂಪುಟದಿಂದ ಎಂಪಿಆರ್ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 12:00 IST
Last Updated 8 ಸೆಪ್ಟೆಂಬರ್ 2011, 12:00 IST

ಶಿಕಾರಿಪುರ: ಕಾಗಿನೆಲೆ ಸ್ವಾಮೀಜಿ ವಿರುದ್ಧ ಅಬಕಾರಿ ಸಚಿವ ರೇಣುಕಾಚಾರ್ಯ ಕ್ಲುಲ್ಲಕ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಕುರುಬ ಸಮಾಜ ಕರೆ ನೀಡಿದ್ದ ಶಿಕಾರಿಪುರ ಬಂದ್ ಬುಧವಾರ ಸಂಪೂರ್ಣ ಯಶಸ್ವಿಯಾಗಿದೆ.

ಪಟ್ಟಣದ ಎಲ್ಲಾ ವ್ಯಾಪಾರಸ್ಥರು ಬೆಳಿಗ್ಗೆಯಿಂದಲೇ ತಮ್ಮ ಅಂಗಡಿಗಳನ್ನು ತೆರೆಯದೇ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಯಾವುದೇ ಖಾಸಗಿ ಬಸ್‌ಗಳು ಸಂಚಾರ ನಡೆಸದ್ದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಬೋಗಿ ರಾಮಪ್ಪ ಕನಕ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಸಚಿವ ರೇಣುಕಾಚಾರ್ಯ ಅಣಕು ಶವಯಾತ್ರೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಬಸ್‌ನಿಲ್ದಾಣದ ಸಮೀಪ ಪ್ರತಿಕೃತಿ ದಹಿಸಲಾಯಿತು.

ಕುರುಬ ಸಮಾಜದ ಮುಖಂಡರು ಮಾತನಾಡಿ, ಕಾಗಿನೆಲೆ ಗುರುಪೀಠ ಕುರುಬ ಸಮಾಜ ಬಾಂಧವರಿಗೆ ಪುಣ್ಯಸ್ಥಳವಾಗಿದ್ದು, ಇದರ ಪೀಠಾಧಿಪತಿಗಳು ಗೌರವ ಸ್ಥಾನದಲ್ಲಿರುತ್ತಾರೆ. ಇವರ ವಿರುದ್ಧ ಕ್ಷುಲ್ಲಕ ಮಾತನ್ನಾಡುವುದು ಭಕ್ತಾದಿಗಳ ಮನಸ್ಸಿಗೆ ಧಕ್ಕೆಯಾಗುವ ಸಂಗತಿಯಾಗಿದೆ ಎಂದರು.

ಸ್ವಾಮೀಜಿಗಳ ವಿರುದ್ಧ ಗೌರವಯುತವಾದ ಮಾತನಾಡಲು ಬಾರದ ಸಚಿವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು. ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಕ್ಷೇತ್ರದ ಶಾಸಕ ಬಿ.ಎಸ್. ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟಿಸುವುದಾಗಿ ಸಭೆಯಲ್ಲಿ ಹೇಳಿದರು.
ರೇಣುಕಾಚಾರ್ಯರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸುವ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಲಾಯಿತು.
 
ಮುಖಂಡರಾದ ಬಿ.ಸಿ. ವೇಣುಗೋಪಾಲ್, ಗೋಣಿ ಮಾಲತೇಶ್, ಬೋಗಿರಾಮಪ್ಪ, ಹುಲ್ಮಾರ್ ಮಹೇಶ್, ಎಸ್.ಎಚ್. ಮಂಜುನಾಥ್, ಟಿ. ನೀಲಪ್ಪ, ನಾಗರಾಜ್ ಕಂಚುಗಾರ್, ಗುಡ್ಡಳ್ಳಿ ಶಿವಮೂರ್ತಿ, ಹುಲುಗಿ ಕೃಷ್ಣ, ತ್ಯಾಗರ್ತಿ ರವಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.