ADVERTISEMENT

ಸಂಸತ್‌ಗೆ ಮುತ್ತಿಗೆ: ರೈತರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 7:30 IST
Last Updated 8 ಮಾರ್ಚ್ 2011, 7:30 IST
ಸಂಸತ್‌ಗೆ ಮುತ್ತಿಗೆ: ರೈತರ ಎಚ್ಚರಿಕೆ
ಸಂಸತ್‌ಗೆ ಮುತ್ತಿಗೆ: ರೈತರ ಎಚ್ಚರಿಕೆ   

ಶಿವಮೊಗ್ಗ: ಗುಟ್ಕಾ ಪ್ಲಾಸ್ಟಿಕ್ ಸ್ಯಾಷೇ ನಿಷೇಧದ ಗುಮ್ಮದಿಂದ ಅಡಿಕೆ ಬೆಳೆಗಾರರನ್ನು ಮುಕ್ತಗೊಳಿಸದಿದ್ದರೆ ರೈತರೊಂದಿಗೆ ಸಂಸತ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಪದ್ಮನಾಭ ಭಟ್ ಎಚ್ಚರಿಸಿದರು. ನಗರದ ವಕ್ಫ್ ಮಂಡಳಿ ಆವರಣದಲ್ಲಿ ಭಾನುವಾರ ಜಿಲ್ಲಾ ಅಡಿಕೆ ಬೆಳೆಗಾರರ ಒಕ್ಕೂಟ ಹಮ್ಮಿಕೊಂಡಿದ್ದ ಗುಟ್ಕಾ ಪ್ಲಾಸ್ಟಿಕ್ ಸ್ಯಾಷೇ ನಿಷೇಧ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗುಟ್ಕಾ ಪ್ಲಾಸ್ಟಿಕ್ ಸ್ಯಾಷೇ ನಿಷೇಧದ ವಿರುದ್ಧ ಹೋರಾಟ ಆರಂಭವಾಗಿದೆ. ಈ ಹೋರಾಟವನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುವುದು. ಯಾವುದಕ್ಕೂ ಸ್ಪಂದಿಸದಿದ್ದರೆ ಅಂತಿಮವಾಗಿ ಸಂಸತ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜಕೀಯತೀತವಾಗಿ ಹೋರಾಟ ತೆಗೆದುಕೊಂಡು ಹೋಗುತ್ತಿದ್ದೇವೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದ ಅವರು, ಗುಟ್ಕಾ ಹಾನಿಕಾರಕ ಎಂಬುದು ನಮಗೆ ಗೊತ್ತಿಲ್ಲ. ನಾವು ಬೆಳೆದ ಅಡಿಕೆಗೆ ಮಾರುಕಟ್ಟೆ ಸಿಗಬೇಕು ಅಷ್ಟೇ. ಆಳುವ ವರ್ಗ ಈ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

‘ಮೇಲ್ಮನವಿ ಸಲ್ಲಿಸಿ’: ಸಭೆ ಉದ್ಘಾಟಿಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ, ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ನಿಷೇಧದ ಆದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೇಲ್ಮನವಿ ಸಲ್ಲಿಸಿ, ಈ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.  ರೈತರಿಗೆ ಅನ್ಯಾಯ ಮಾಡಿ ಪ್ಲಾಸ್ಟಿಕ್ ನಿಷೇಧಕ್ಕೆ ನಮ್ಮ ಒಪ್ಪಿಗೆ ಇಲ್ಲ. ಹಾಗೊಂದು ವೇಳೆ ನಿಷೇಧಿಸುವುದಾದರೆ ಎಲ್ಲ ಪ್ರಕಾರದ ಮತ್ತು ವರ್ಗದ ಪ್ಲಾಸ್ಟಿಕ್‌ಗಳನ್ನೂ ನಿಷೇಧಿಸಲಿ ಎಂದು ಒತ್ತಾಯಿಸಿದರು.

ಬರುವ ಏಪ್ರಿಲ್ 16 ಮತ್ತು 18ಕ್ಕೆ ಗುಟ್ಕಾ ನಿಷೇಧ ಸಂಬಂಧಿಸಿದಂತೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಆಗ, ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಡಿಕೆ ಪಕ್ಷ: ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ಗುಟ್ಕಾ ನಿಷೇಧಿಸುವ ಮುನ್ನ ಗುಟ್ಕಾ ಬಗ್ಗೆ ಸಂಶೋಧನೆ ಮಾಡಬೇಕು. ಪ್ಲಾಸ್ಟಿಕ್ ಸ್ಯಾಷೇ ನಿಷೇಧದ ಸಮಸ್ಯೆ ಮುಗಿಯುವವರೆಗೂ ಎಲ್ಲರದ್ದೂ ಅಡಿಕೆ ಪಕ್ಷ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ರೈತರಲ್ಲಿ ಎದೆಗಾರಿಕೆ ಮತ್ತು ಒಗ್ಗಟ್ಟು ಇಲ್ಲದ್ದರಿಂದ ಶೋಷಣೆ ನಡೆಯುತ್ತಿದೆ. ಸಂಘಟಿತರಾಗಿ ಇದರ ವಿರುದ್ಧ ಹೋರಾಡಬೇಕು. ಜತೆಗೆ, ಬೆಂಬಲ ಬೆಲೆಗೂ ಒತ್ತಾಯಿಸಬೇಕು ಎಂದರು. ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ಸಮಸ್ಯೆ ಅಡಿಕೆ ಬೆಳೆಗಾರರಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಅವಲಂಬಿಸಿದ ಅಡಿಕೆ ವ್ಯಾಪಾರಿಯಿಂದ ಹಿಡಿದು ಸರ್ಕಾರಕ್ಕೆ ಬರುವ ತೆರಿಗೆಯ ಮೇಲೂ ಪರಿಣಾಮ ಬೀರಲಿದೆ.

ಆದ್ದರಿಂದ, ಅಡಿಕೆಯ ಪರ್ಯಾಯ ಬಳಕೆಗೆ ಸಂಬಂಧಿಸಿದಂತೆ ಸಂಶೋಧನೆಗಳು ನಿರಂತರವಾಗಿರಬೇಕು. ಅಂದಾಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ರೈತ ಮುಖಂಡ ಕಡಿದಾಳು ಶಾಮಣ್ಣ, ‘ಮ್ಯಾಮ್ಕೋಸ್’ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್, ಶಾಸಕಎಚ್.ಎಂ. ಚಂದ್ರಶೇಖರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎ. ರಮೇಶ್ ಹೆಗ್ಡೆ, ರೈತ ಸಂಘದ ಖಜಾಂಚಿ ಡಾ.ಬಿ.ಎಂ. ಚಿಕ್ಕಸ್ವಾಮಿ, ಜೆ.ಬಿ. ಪಾಲಾಕ್ಷಪ್ಪ, ‘ತುಮ್ಕೋಸ್’ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಭಾರತ್ ಸೇವಾದಲದ ಅಧ್ಯಕ್ಷ ವೈ.ಎಚ್. ನಾಗರಾಜ್  ಉಪಸ್ಥಿತರಿದ್ದರು. ಜಿಲ್ಲಾ ಅಡಿಕೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೂಡ್ಲಿಗೆರೆ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.